ಮನಪಾ ವ್ಯಾಪ್ತಿಯಲ್ಲಿ 500 ಚ.ಮೀ.ವರೆಗಿನ ಕಟ್ಟಡಗಳಿಗೆ ವಲಯ ಕಚೇರಿಯಿಂದ ಪರವಾನಿಗೆ: ಆನಂದ್ ಸಿ.ಎಲ್

ಆನಂದ್ ಸಿ.ಎಲ್.
ಮಂಗಳೂರು, ಆ. 18: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 500 ಚ.ಮೀ ವಿಸ್ತೀರ್ಣವರೆಗಿನ ಎಲ್ಲಾ ವಾಸ್ತವ್ಯ, ವಾಣಿಜ್ಯ ಮತ್ತು ಇತರೆ ಉದ್ದೇಶದ ಕಟ್ಟಡಗಳಿಗೆ ಪರವಾನಿಗೆ, ಪ್ರವೇಶ ಪತ್ರಗಳ ಮಂಜೂರಾತಿ ಹಾಗೂ ಪರವಾನಿಗೆ ನವೀಕರಣ ಹಾಗೂ ಕಟ್ಟಡ ದುರಸ್ಥಿಗೆ ಸಂಬಂಧಪಟ್ಟ ಎಲ್ಲಾ ಕಡತಗಳನ್ನು ಸಹಾಯಕ ನಗರಯೋಜನಾಧಿಕಾರಿಯವರ ವರದಿ ಆಧಾರದ ಮೇಲೆ ವಲಯ ಆಯುಕ್ತರಿಗೆ ಮಂಜೂರಾತಿಗೊಳಿಸುವ ಅಧಿಕಾರವನ್ನು ನೀಡಿ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಆದೇಶಿಸಿದ್ದಾರೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ವಾಸ್ತವ್ಯ, ವಾಣಿಜ್ಯ ಮತ್ತು ಇತರೆ ಕಟ್ಟಡಗಳ ಪರವಾನಿಗೆ ಮತ್ತು ಪ್ರವೇಶ ಪತ್ರಗಳ ಮಂಜೂರಾತಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ 250 ಚ.ಮೀ ವೀಸ್ತೀರ್ಣಕ್ಕೆ ಮೇಲ್ಪಟ್ಟ ಎಲ್ಲಾ ಕಡತಗಳು ಆಯುಕ್ತರ ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಸಲ್ಲಿಸಬೇಕಾಗಿದೆ. ಈ ಕಡತಗಳ ವಿಲೇವಾರಿಯಲ್ಲಿನ ನ್ಯೂನ್ಯತೆಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದರಿಂದ ಈ ಕ್ರಮವನ್ನು ಮಹಿಸಲಾಗಿದೆ. ಇನ್ನು ಮುಂದೆ 500 ಚ.ಮೀ. ವಿಸ್ತೀರ್ಣದವರೆಗಿನ ಕಟ್ಟಡಗಳ ಪರವಾನಿಗೆ, ಪ್ರವೇಶ ಪತ್ರಗಳ ಮಂಜೂರಾತಿ ಹಾಗೂ ಪರವಾನಿಗೆ ನವೀಕರಣ, ಕಟ್ಟಡ ದುರಸ್ತಿ ಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ವಲಯ ಹಂತದಲ್ಲಿ ಸ್ವೀಕರಿಸಿ ವಲಯ ಆಯುಕ್ತರು ಮಂಜೂರಾತಿ ನೀಡಲಿದ್ದಾರೆ.
ಈ ಕಡತಗಳನ್ನು 15 ದಿನಗಳ ಕಾಲಮಿತಿಯೊಳಗೆ ಹಾಗೂ ಸರಕಾರದಿಂದ ಜಾರಿಗೆ ತಂದಿರುವ ನಿರ್ಮಾಣ್ 2 (LBPAS) ಆನ್ಲೈನ್ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ನಿರ್ವಹಿಸಲು ನಿರ್ದೇಶನ ನೀಡಲಾಗಿರುತ್ತದೆ. ಅಲ್ಲದೆ ಜಂಟಿ ನಿರ್ದೇಶಕರು (ನಗರಯೋಜನೆ) ಇವರಿಗೆ ಪ್ರತೀ ತಿಂಗಳು ಈ ಕಡತಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸಲು ತಿಳಿಸಲಾಗಿದೆ. ಕಟ್ಟಡ ನಿರ್ಮಾಣ ಪರವಾನಿಗೆ ಮತ್ತು ಪ್ರವೇಶ ಪತ್ರಗಳಿಗೆ ಸಂಬಂಧಪಟ್ಟಂತೆ ಪ್ರತೀ ತಿಂಗಳು ಸರಾಸರಿ 150 ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಈ ವ್ಯವಸ್ಥೆ ಜಾರಿಗೆ ತಂದ ಹಿನ್ನಲೆಯಲ್ಲಿ ಇನ್ನು ಮುಂದೆ ಕಟ್ಟಡ ನಿರ್ಮಾಣದಾರರು ಕೇಂದ್ರ ಕಚೇರಿಗೆ ಆಗಮಿಸಬೇಕಾದ ಅವಶ್ಯಕತೆಯಿಲ್ಲದೆ ನೇರವಾಗಿ ವಲಯ ಕಚೇರಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.







