ಪೆರ್ನೆ: ನೆಡುತೋಪಿನಲ್ಲಿ ಕಾಡ್ಗಿಚ್ಚು

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ, ಬಿಳಿಯೂರು ಗ್ರಾಮದ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು, ಕುಂಕಂತೋಟ ಎಂಬಲ್ಲಿ ಕಾಡ್ಗಿಚ್ಚು ಪ್ರಸಹರಿಸಿ ಭಾರೀ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗಿಡಾದ ಘಟನೆ ಗುರುವಾರ ಸಂಭವಿಸಿದೆ.
ಪೆರ್ನೆ ಗ್ರಾಮದಲ್ಲಿ ವಿದ್ಯುತ್ ತಂತಿಯಿಂದ ಉಂಟಾದ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಪ್ರಸಹರಿಸಿ ಬಿಳಿಯೂರು , ಕೋಡಿಂಬಾಡಿ ಪ್ರದೇಶದ ಗೇರು ಅಭಿವೃದ್ಧಿ ನಿಗಮದ ನೆಡುತೋಪು ಪ್ರದೇಶವನ್ನು ಆವರಿಸಿತು. ಇದರಿಂದಾಗಿ ಈ ಪ್ರದೇಶದಲ್ಲಿದ್ದ ಸಾವಿರಾರು ಗೇರು ಮರಗಳು ಇನ್ನಿತರ ಕಾಡು ಮರಗಳು ಬೆಂಕಿಗಾಹುತಿಯಾಗಿ ಅಪಾರ ನಷ್ಠ ಸಂಭವಿಸಿದೆ.
ಅಗ್ನಿ ನಿಯಂತ್ರಿಸಲು ಮುಂದಾಗಿದ್ದ ವೇಳೆ ಹಾವು ಕಡಿತ: ಕಾಡ್ಗಿಚ್ಚು ಪ್ರಸಹರಿಯುತ್ತಿದ್ದಂತೆಯೇ ಬೆಂಕಿಯನ್ನು ನಂದಿಸಲು ಮುಂದಾದ ಗೇರು ಅಭಿವೃದ್ಧಿ ನಿಗಮ, ಅರಣ್ಯ ಇಲಾಖಾಧಿಕಾರಿಗಳ ತಂಡ , ಮತ್ತು ಸ್ಥಳೀಯರು ಅಗ್ನಿಶಾಮಕ ದಳದ ಸಹಾಯ ಪಡೆದು ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರು. ಈ ವೇಳೆ ಅರಣ್ಯ ವೀಕ್ಷಕ ಶೇಖರ ಪೂಜಾರಿಯವರು ಬೆಂಕಿಯನ್ನು ನಿಯಂತ್ರಿಸುತ್ತಿದ್ದ ವೇಳೆ ಕಾಡ್ಗಿಚ್ಚಿನ ಕೆನ್ನಾಲೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿದೆ. ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೆಡುತೋಪು ಅಧೀಕ್ಷಕ ರವಿಪ್ರಸಾದ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.
ಬೆಂಕಿ ನಿಯಂತ್ರಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಕಾಂತರಾಜು, ಸುಧೀರ್ ಹೆಗ್ಡೆ, ಉಲ್ಲಾಸ್ ಮೊದಲಾದವರು ಭಾಗವಹಿಸಿದ್ದರು. ಪುತ್ತೂರಿನ ಅಗ್ನಿಶಾಮಕ ದಳ ಹಲವು ಬಾರಿ ನೀರು ತುಂಬಿಸಿ ಕೊಂಡು ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸಿತ್ತು. ಕಾಡ್ಗಿಚ್ಚು ಪ್ರಸಹರಿಸಿದ ಸ್ಥಳದ ಬಳಿ ಜನವಸತಿ ಇದ್ದ ಕಾರಣ ಹೆಚ್ಚಿನ ಅನಾಹುತ ಆಗದಂತೆ ಸ್ಥಳೀಯರು ಮತ್ತು ಇಲಾಖಾಧಿಕಾರಿಗಳು ಕಾಳಜಿ ವಹಿಸಿ ಶ್ರಮಿಸಿದರು.







