ಎಸ್ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್ಐನ ಹಿಂಬಾಗಿಲ ರಾಜಕೀಯ ಪ್ರವೇಶ : ಕ್ಯಾಪ್ಟನ್ ಚೌಟ

ಬ್ರಿಜೇಶ್ ಚೌಟ
ಹೊಸದಿಲ್ಲಿ,ಡಿ.5: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ ) ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ ) ಕಾರ್ಯಕರ್ತರ ಸೋಗಿನಲ್ಲಿ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶುಕ್ರವಾರ ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಜಾರಿ ನಿರ್ದೇಶನಾಲಯದ(ಈಡಿ) 2025ರ ನ.8ರ ಪತ್ರಿಕಾ ಪ್ರಕಟನೆೆಯನ್ನು ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ಕ್ಯಾ.ಚೌಟ ಅವರು, ಎಸ್ಡಿಪಿಐ ನಿಷೇಧಿತ ಪಿಎಫ್ಐನ ರಾಜಕೀಯ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ಈ ಪಿಎಫ್ಐಯು ಎಸ್ಡಿಪಿಐ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವ ಜತೆಗೆ ಅದಕ್ಕೆ ಫಂಡಿಂಗ್ ಮಾಡುವ ಅತ್ಯಂತ ಗಂಭೀರ ವಿಚಾರವನ್ನೂ ಈಡಿ ಉಲ್ಲೇಖಿಸಿದೆ. ಹೀಗಿರುವಾಗ, ಪಿಎಫ್ಐ ಒಂದು ನಿಷೇಧಿತ ಸಂಘಟನೆಯಾಗಿರುವ ಕಾರಣ ಚುನಾವಣೆಯ ಮೇಲೆ ಪ್ರಭಾವ ಬೀರಲು ಅದು ಬಳಸುವ ಯಾವುದೇ ಗುಪ್ತ ಮಾರ್ಗವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ ಎಂದು ಹೇಳಿದರು.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಪ್ರದೇಶಗಳು ನಿಷೇಧಿತ ಪಿಎಫ್ಐ ಸಂಘಟನೆಯ ದುಷ್ಕೃತ್ಯಗಳಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದ್ದು, ಕೇಂದ್ರ ಗೃಹ ಸಚಿವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಪ್ರಸ್ತುತ ಈ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ನಮ್ಮ ಪ್ರದೇಶವು ಇಂಥಹ ದುಷ್ಟ ಶಕ್ತಿಗಳ ಅಕ್ರಮಣಕ್ಕೆ ನಿರಂತರ ತುತ್ತಾಗುವ ಅಪಾಯವಿದೆ ಎಂಬುದಕ್ಕೆ ಈ ಕೊಲೆ ಪ್ರಕರಣ ಒಂದು ನಿದರ್ಶನ ಎಂದು ಕ್ಯಾ.ಚೌಟ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಿಷೇಧಿತ ಪಿಎಫ್ಐ ಹಾಗೂ ಎಸ್ಡಿಪಿಐ ನಡುವಿನ ರಾಜಕೀಯ ಲಿಂಕ್ ನ ಬಗ್ಗೆ ತುರ್ತು ಗಮನಹರಿಸುವ ಅಗತ್ಯವಿದೆ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಡಿಪಿಐ ಹಲವು ಸ್ಥಾನಗಳನ್ನು ಪಡೆದುಕೊಂಡಿದೆ. ಅಲ್ಲದೆ ಕಳೆದ ವರ್ಷ ನಡೆದ ಬಂಟ್ವಾಳ ಪುರಸಭೆಯ ಅಧ್ಯಕ್ಷರ ಚುನಾವಣೆಯಲ್ಲಿಯೂ ಎಸ್ಡಿಪಿಐ ಪ್ರಮುಖ ಸ್ಥಾನಗಳಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿತ್ತು ಎಂದು ಹೇಳಿದರು.
ನಿಷೇಧಿತ ಸಂಘಟನೆಗಳು ಹೊಸ ರೂಪದಲ್ಲಿ ತನ್ನ ಚಟುವಟಿಕೆ ಮುಂದುವರಿಸಲು ಅಥವಾ ರಾಜಕೀಯ ಪಕ್ಷಗಳನ್ನು ಮುಂದಿಟ್ಟು ಚುನಾವಣಾ ನ್ಯಾಯಸಮ್ಮತತೆ ಪಡೆಯುವ ಯತ್ನವನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ನೀಡಿದೆ. ಆದರೆ, ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಕ್ಯಾ.ಚೌಟ ಅವರು ಸದನದಲ್ಲಿ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.







