ಪಣಂಬೂರು: ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ತಂದೆಯನ್ನು ರಕ್ಷಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಪಣಂಬೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೊಬ್ಬನನ್ನು ಪಣಂಬೂರು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಸೋಮವಾರ ಮುಸ್ಸಂಜೆ ವರದಿಯಾಗಿದೆ.
ಕೂಳೂರು ಪಂಜಿಮೊಗರು ಅಂಬಿಕಾ ನಗರ ನಿವಾಸಿ ರಾಜೇಶ್(35) ಮತ್ತವರ ನಾಲ್ಕು ವರ್ಷದ ಪುತ್ರಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ರಾಜೇಶ್ ತನ್ನ ಮಗಳೊಂದಿಗೆ ತಣ್ಣೀರುಬಾವಿ ಬೀಚ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ಈ ವೀಡಿಯೊವನ್ನು ಸಾರ್ವಜನಿಕರೊಬ್ಬರು ಪಣಂಬೂರು ಉಪವಿಭಾಗದ ಎಸಿಪಿ ಶ್ರೀಕಾಂತ್ರಿಗೆ ಕಳುಹಿಸಿದ್ದರು. ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ತಕ್ಷಣ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆದರೆ ಆ ವೀಡಿಯೊ ಯಾವ ಬೀಚ್ನಲ್ಲಿ ಚಿತ್ರೀಕರಿಸಿದ್ದು ಎಂದು ಗೊತ್ತಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡು ತಂಡಗಳಾಗಿ ಪಣಂಬೂರು, ತಣ್ಣೀರು ಬಾವಿ ಬೀಚ್ ಗಳಿಗೆ ತೆರಳಿ ಪರಿಶೀಲಿಸಿದ್ದರು. ತಣ್ಣೀರುಬಾವಿ ಬೀಚ್ನಲ್ಲಿ ಗಂಟೆಯ ಹಿಂದೆ ವೀಡಿಯೋದಲ್ಲಿದ್ದ ತಂದೆ-ಮಗಳನ್ನು ನೋಡಿದ್ದಾಗಿ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು.
ಆ ಮಾಹಿತಿಯನ್ನು ಆಧರಿಸಿ ವಿಚಾರಿಸಿದಾಗ ಅದು ರಾಜೇಶ್ ಎಂದು ತಿಳಿದುಬಂದಿತ್ತು. ತಕ್ಷಣ ಅವರ ಮೊಬೈಲ್ ನಂಬರ್ ಕಲೆ ಹಾಕಿ ಕರೆ ಮಾಡಿದರೆ ಅದು ಸ್ವಿಚ್ಆಫ್ ಆಗಿತ್ತು. ರಾತ್ರಿ 9:15ರ ಸುಮಾರಿಗೆ ರಾಜೇಶ್ರ ಮೊಬೈಲ್ ಆನ್ ಆಗಿತ್ತು. ತಕ್ಷಣ ಅವರ ಮೊಬೈಲ್ ಲೊಕೇಶನ್ ಆಧರಿಸಿ ಪಂಜಿಮೊಗರು ಅಂಬಿಕಾ ನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿ ಮುಚ್ಚಲಾಗಿತ್ತು. ಕಿಟಿಕಿಯಲ್ಲಿ ನೋಡಿದಾಗ ರಾಜೇಶ್ ಸೀರೆಯಿಂದ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಳ್ಳುವ ಯತ್ನ ದಲ್ಲಿದ್ದರು. ತಕ್ಷಣ ಪೊಲೀಸರು ಬಾಗಿಲು ಒಡೆದು ಮನೆ ಯೊಳಗೆ ಪ್ರವೇಶಿಸಿ ಅವರನ್ನು ರಕ್ಷಿಸಿದ್ದಾರೆ.
ಪಣಂಬೂರು ಪೊಲೀಸರ ಸಕಾಲಿಕ ಕ್ರಮಕ್ಕೆ ಶ್ಲಾಘನೆ
ಮಗುವಿನೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ಸಕಾಲಿಕ ಕಾರ್ಯಾಚರಣೆ ಮೂಲಕ ರಕ್ಷಿಸಿದ ಪಣಂಬೂರು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಪಣಂಬೂರು ಎಸಿಪಿಯವರಿಂದ ಮಾಹಿತಿ ಬಂದಾಕ್ಷಣ ಕಾರ್ಯಪ್ರವೃತ್ತರಾದ ಗುಪ್ತ ವಾರ್ತೆ ವಿಭಾಗದ ಸಿಬ್ಬಂದಿ ಪಕಿರೇಶ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯಾದ ರಾಕೇಶ್ ಮತ್ತು ಶರಣ ಬಸವ ಎಂಬವರು ತಕ್ಷಣ ತಣ್ಣೀರು ಬಾವಿ ಬೀಚ್ನಲ್ಲಿ ಹುಡುಕಾಡಿದ್ದಾರೆ. ಎಲ್ಲೂ ಸಿಗದಿದ್ದಾಗ ಬೀಚ್ ನಲ್ಲಿದ್ದ ಅಂಗಡಿ, ಸಾರ್ವಜನಿಕರ ಬಳಿ ವಿಚಾರಿಸಿದ್ದಾರೆ. ವೀಡಿಯೊದಲ್ಲಿರುವ ವ್ಯಕ್ತಿ ಬೀಚ್ಗೆ ಬಂದಿರುವ ಮಾಹಿತಿ ಕಲೆ ಹಾಕಿ ಆತನ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ರಾಜೇಶ್ನ ಮೊಬೈಲ್ ಸಂಖ್ಯೆ ಕಲೆ ಹಾಕಿ ಸತತ ಪ್ರಯತ್ನದ ಮೂಲಕ ಅವರ ಲೊಕೇಶನ್ ಕಂಡುಹಿಡಿಯುವಲ್ಲಿ ಯಶಸಿಯಾಗಿದ್ದಾರೆ. ತಕ್ಷಣ ಅಲ್ಲಿಗೆ ತೆರಳಿ ತಂದೆ-ಮಗಳ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕನನ್ನು ರಕ್ಷಿಸಿದ ಪಣಂಬೂರು ಪೊಲೀಸರ ಸಕಾಲಿಕ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







