ಪೂಂಜಾಲಕಟ್ಟೆ: ಖಾಸಗಿ ಬಸ್ ಢಿಕ್ಕಿ; ಪಾದಚಾರಿ ಮಹಿಳೆ ಮೃತ್ಯು

ಬಂಟ್ವಾಳ : ಹೆದ್ದಾರಿ ದಾಟುತ್ತಿದ್ದ ಮಹಿಳೆಯೋರ್ವರಿಗೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ.
ಮೃತ ಪಾದಚಾರಿ ಮಹಿಳೆಯನ್ನು ಸುನಂದಲತಾ (55) ಎಂದು ಹೆಸರಿಸಲಾಗಿದೆ. ಇವರು ಪಣಕಜೆ ಎಂಬಲ್ಲಿ ಬಳ್ಳಮಂಜಕ್ಕೆ ಹೋಗುವ ರಸ್ತೆ ಬಳಿಯಿಂದ ಹೆದ್ದಾರಿಗೆ ಬಂದು ಹೆದ್ದಾರಿ ದಾಟುತ್ತಿದ್ದ ವೇಳೆ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಮುಹಮ್ಮದ್ ಶರೀಫ್ ಎಂಬವರು ಚಲಾಯಿಸಿಕೊಂಡು ಬಂದ ತುಳುನಾಡು ಎಂಬ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ಸುನಂದ ಅವರ ತಲೆಗೆ ಗಂಭೀರ ಏಟಾಗಿದ್ದು, ತಕ್ಷಣ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಾಲಾಡಿ ಗ್ರಾಮದ ಪೊಮ್ಮಾಜೆ ನಿವಾಸಿ ಇಸ್ಮಾಯಿಲ್ ಎಂಬವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





