ನಾಳೆಯಿಂದ ಪೊಸೋಟ್ ತಂಙಳ್ ಉರೂಸ್: ಮಳ್‌ಹರ್ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ

ಮಂಗಳೂರು, ಜೂ.18: ಕರ್ನಾಟಕ ಮತ್ತು ಕೇರಳದಲ್ಲಿ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರೂ ಧಾರ್ಮಿಕ ವಿದ್ವಾಂಸರೂ ಆಗಿದ್ದ ಖಾಝಿ ಅಸ್ಸಯ್ಯಿದ್ ಉಮರುಲ್ ಫಾರೂಕ್ ಆಲ್ ಬುಖಾರಿ ಪೊಸೋಟ್ ತಂಳ್ ಅವರ ಹತ್ತನೇ ಉರೂಸ್ ಹಾಗೂ ಅವರು ಸ್ಥಾಪಿಸಿದ ಮಂಜೇಶ್ವರ ಹೊಸಂಗಡಿಯ ಮಳ್‌ಹರ್ ವಿದ್ಯಾಸಂಸ್ಥೆಯ ರಜತ ಮಹೋತ್ಸವವು ಜೂ. 19ರಿಂದ 22ರವರೆಗೆ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಜಲಾಲುದ್ದೀನ್ ಬುಖಾರಿ ತಂಙಳ್, ಜೂ. 19ರ ಸಂಜೆ 4.30ಕ್ಕೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧ್ಯಕ್ಷ ಸಯ್ಯಿದ್ ಆಟಕೋಯ ತಂಳ್ ಕುಂಬೋಲ್ ಉದ್ಘಾಟಿಸಲಿದ್ದು, ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎಂ.ಕೆ.ಎಂ. ಆಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅಂದು ರಾತ್ರಿ 8ಕ್ಕೆ ಸಂಸ್ಥೆಯ ಮುಖ್ಯಸ್ಥ ಸಯ್ಯಿದ್ ಶಹೀರ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್‌ನಲ್ಲಿ ಸಯ್ಯಿದ್ ಜಲಾಲುದ್ದೀನ್ ಸಅದಿ, ಸ್ಟಾಲಿಹ್ ಸಅದಿ ತಳಿಪ್ಪರಂಬ, ಹಂಝ ಕೋಯ ಬಾಖವಿ ಭಾಗವಹಿಸುವರು. ಜೂ. 20ರಂದು ಮಧ್ಯಾಹ್ನದಿಂದ ಆರಂಭಗೊಳ್ಳುವ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಯ್ಯಿದ್ ಬಾಯಾರ್ ತಂಙಳ್, ಸಯ್ಯಿದ್ ಕಲ್ಲಕಟ್ಟ ತಂಙಳ್, ಸಯ್ಯಿದ್ ಪಿ.ಎಸ್.ಎ. ತಂಙಳ್ ಬಾಹಸನ್ ನೇತೃತ್ವ ವಹಿಸುವರು ಎಂದು ಮಳ್‌ಹರ್ ಕರ್ನಾಟಕ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಂ. ಅಬೂಬಕರ್ ಸಿದ್ದೀಕ್ ವಿವರ ನೀಡಿದರು.
ಜೂ.21 ರಂದು ಅಪರಾಹ್ನ 2 ಗಂಟೆಗೆ ಸಾಮಾಜಿಕ ಸಮಾವೇಶ ಮತ್ತು 7 ಗಂಟೆಗೆ ಸನದುದಾನ ಸಮಾರಂಭ ನಡೆಯಲಿದೆ. ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ರಈಸುಲ್ ಉಲಮಾ ಸುಲೈಮಾನ್ ಮುಸ್ಲಿಯಾರ್ ಪದವಿ ಪ್ರದಾನ ಮಾಡಲಿದ್ದು, ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಘಟಿಕೋತ್ಸವ ಭಾಷಣ ಮಾಡುವರು. ಇದೇ ವೇಳೆ ಸಯ್ಯಿದ್ ಪೊಸೋಟ್ ತಂಙಳ್ ಅವರು ಕರ್ನಾಟಕದ ಹಾವೇರಿಯಲ್ಲಿ ಸ್ಥಾಪಿಸಿದ ಮುಈನುಸ್ಸುನ್ನ ವಿದ್ಯಾಸಂಸ್ಥೆಯ ವತಿಯಿಂದ ನೀಡಲಾಗುವ ಸಾಧಕ ಪ್ರಶಸ್ತಿಯನ್ನು ಡಾ. ಫಾಝಿಲ್ ರಝ್ವಿ ಹಝ್ರತ್ ಕಾವಲಕಟ್ಟೆ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಮುಹಮ್ಮದ್ ಸಾಗರ್ ವಿವರಿಸಿದರು.
ಜೂ.22 ರಂದು ಪೂರ್ವಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಅವರು ಹೇಳಿದರು.
ಕೇರಳದ ಕಲ್ಲಿಕೋಟೆಯಿಂದ ಗಡಿನಾಡು ಹೊಸಂಗಡಿ ಬಳಿ ಪೊಸೋಟ್ ಎಂಬಲ್ಲಿಗೆ ಧರ್ಮಗುರುವಾಗಿ ಆಗಮಿಸಿದ್ದ ಪ್ರವಾದಿ ಕುಟುಂಬದ ಸಯ್ಯಿದ್ ಪೋಸೋಟ್ ತಂಙಳ್ 2000ದಲ್ಲಿ ಮಳ್‌ಹರ್ ವಿದ್ಯಾಸಂಸ್ಥೆಯನ್ನು ಕೇವಲ 10 ವಿದ್ಯಾರ್ಥಿಗಳಿಂದ ಆರಂಭಿಸಿ ಇದೀಗ 25 ವರ್ಷಗಳನ್ನು ಪೂರೈಸುತ್ತಿದೆ. ಇದೀಗ ಕೇರಳ ಅಲ್ಲದೆ, ಕರ್ನಾಟಕದ ಬಳ್ಳಾರಿ, ಕೋಟೆಕಾರ್, ಕಿನ್ನಿಗೋಳಿ, ಮಹಾರಾಷ್ಟ್ರದ ರತ್ನಗಿರಿ ಸೇರಿದಂತೆ 15 ಕಡೆ 35ರಷ್ಟು ವಿವಿಧ ಧಾರ್ಮಿಕ, ಲೌಕಿಕ ಶಿಕ್ಷಣ ಸಂಸ್ಥೆಗಳು, ಮಹಿಳಾ ಕಾಲೇಜುಗಳು, ವೃತ್ತಿ ತರಬೇತಿ ಸೇರಿ ಬಹುಮುಖ ವಿದ್ಯಾ ಕೇಂದ್ರವಾಗಿ 4000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಳ್‌ಹರ್ ಕರ್ನಾಟಕ ಪ್ರಚಾರ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಸಾಗರ, ವಿದ್ಯಾಸಂಸ್ಥೆಯ ಮ್ಯಾನೇಜರ್ ನ್ಯಾಯವಾದಿ ಹಸನ್ ಕುಂಞಿ, ಮಳ್‌ಹರ್ ಕರ್ನಾಟಕ ಪ್ರಚಾರ ಸಮಿತಿಯ ಕಾರ್ಯದರ್ಶಿ ಅಬೂಸ್ವಾಲಿಹ್ ಗೇರುಕಟ್ಟೆ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ರಹೀಂ ಸಅದಿ ಕತಾರ್, ಎಸ್.ಎಸ್.ಎಫ್. ರಾಜ್ಯ ಕಾರ್ಯದರ್ಶಿ ಅಬ್ದುಲ್ ರಶೀದ್ ಮಡಂತ್ಯಾರು ಉಪಸ್ಥಿತರಿದ್ದರು.







