ಅಡ್ಡೂರು ಸರಕಾರಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಂಗಳೂರು: ಅಡ್ಡೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 'ಸಂಭ್ರಮ' ಶನಿವಾರ ಶಾಲಾ ಮೈದಾನದಲ್ಲಿ ನಡೆಯಿತು.
ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಿದಾಯತ್ ಶಾಲೆಯ ಭವಿಷ್ಯದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದರು. ಮಂಗಳೂರು ಶಿಕ್ಷಣ ವಿಭಾಗದ ಬಿಇಒ ಮತ್ತು ಸಿಆರ್ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಯು.ಪಿ.ಇಬ್ರಾಹೀಂ ಮತ್ತು ಅಶ್ರಫ್ ನಡುಗುಡ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ಮಕ್ಕಳ ಸಾಂಸ್ಕೃತಿಕ ಕಲಾ ಪ್ರತಿಭೆಯು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕ್ರೀಡೆ ಮತ್ತು ಇತರ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಕ್ರೀಡೆಯಲ್ಲಿ ವಿಶೇಷ ಸಾಧನೆಗಾಗಿ ಶಿಕ್ಷಕಿ ನಮೃತಾ, ಅನಿವಾಸಿ ಉದ್ಯಮಿ ಬಿಸಿಸಿಐ ಅಧ್ಯಕ್ಷ ಹಿದಾಯತ್, ಅಹ್ಮದ್ ಬಾವ ತೋಕೂರ್ ಅವರನ್ನು ಸನ್ಮಾನಿಸಲಾಯಿತು.
ಎಸ್ ಡಿಎಂಸಿ ಕಮರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ತನುಶ್ರೀ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ನಮೃತಾ ಕಾರ್ಯಕ್ರಮ ನಿರೂಪಿಸಿದರು.







