ಪತ್ರಕರ್ತರು ವಸ್ತು ನಿಷ್ಠ ವರದಿಗೆ ಆದ್ಯತೆ ಸಿಗಬೇಕು: ಹರೀಶ್ ಇಂಜಾಡಿ
ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ

ಸುಳ್ಯ: ಪತ್ರಿಕಾ ಕ್ಷೇತ್ರ ಸಂವಿಧಾನದ ಅವಿಭಾಜ್ಯ ಅಂಗ. ಮಾಧ್ಯಮಗಳಿರುವಷ್ಟು ಸ್ವಾತಂತ್ರ್ಯ ಯಾವುದೇ ಕ್ಷೇತ್ರಗಳಿಗೂ ಇಲ್ಲ. ಆದರೆ ಕೆಲವೊಮ್ಮೆ ಮಾಧ್ಯಮಗಳು ತಮ್ಮ ಸ್ವಾತಂತ್ರ್ಯವನ್ನೇ ದುರುಪಯೋಗ ಪಡಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಹಾಗೇ ಆಗದೇ ಪತ್ರಕರ್ತರು ತಮ್ಮ ವಸ್ತು ನಿಷ್ಠ ವರದಿಗೆ ಆದ್ಯತೆ ನೀಡಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಹೇಳಿದರು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ-ಉಪನ್ಯಾಸ- ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ನೀಡಿದ ವಿಜಯ ಕರ್ನಾಟಕ ದಿನಪತ್ರಿಕೆಯ ಮುಖ್ಯ ಉಪ ಸಂಪಾದಕ ಆರ್.ಸಿ. ಭಟ್ "ಅಭಿವೃದ್ಧಿ ಪರವಾದ ಚಿಂತನೆಯನ್ನಿಟ್ಟುಕೊಂಡು ಪತ್ರಕರ್ತರು ಕೆಲಸ ಮಾಡಬೇಕು. ಜನಪರ ನಿಲುವು ಹೊಂದಿ ಕೆಲಸ ಮಾಡುವುದು ಪತ್ರಕರ್ತರ ಬದ್ಧತೆ. "ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ. ಪಠ್ಯಪುಸ್ತಕಗಳು ಅಂಕಗಳಿಗಷ್ಟೇ ಸೀಮಿತ. ಅದಕ್ಕಿಂತ ಹೊರಗಿನ ಜ್ಞಾನ ಸಂಪಾದನೆಗೆ ಪತ್ರಿಕೆಗಳನ್ನು ಓದಬೇಕು" ಎಂದು ಹೇಳಿದರು.
ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕರಾದ ಸುಬ್ರಾಯ ಸಂಪಾಜೆಯವರನ್ನು ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಸಂಪಾಜೆಯವರು "ಸತ್ಯ, ನೈಜತೆಯ ವರದಿಗಳಿಂದ ಪತ್ರಕರ್ತರಿಗೆ ಗೌರವ ಸಿಗುತ್ತದೆ. ನಮ್ಮ ಮಿತಿಯಲ್ಲೇ ಪ್ರಗತಿಪರ ದೃಷ್ಟಿಕೋನದಲ್ಲಿ ಕೆಲಸ ಮಾಡಬೇಕು. ಆ ಮೂಲಕ ನಾವು ಬೆಳೆಯೋಣ. ಪೀಳಿಗೆಯನ್ನು ಬೆಳೆಸೋಣ" ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸನ್ಮಾನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಬಹುಮಾನ ವಿತರಣೆ : ಪತ್ರಿಕಾ ದಿನಾಚರಣೆ ಪ್ರಯುಕ್ತ ಜು.12ರಂದು ಸುಳ್ಯದ ಎ.ಪಿ.ಎಂ.ಸಿ.ಯಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸ್ಪರ್ಧಾ ಕಾರ್ಯಕ್ರಮಗಳ ಬಹುಮಾನ ವಿತರಣೆ ಇದೇ ಸಂದರ್ಭದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ದಯಾನಂದ ಕಲ್ನಾರ್ ಬಹುಮಾನ ಪಟ್ಟಿ ವಾಚಿಸಿದರು.
ಚಿತ್ರಾ ಮಟ್ಟಿ ಪ್ರಾರ್ಥಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಜಯಪ್ರಕಾಶ್ ಕುಕ್ಕೆಟ್ಟಿ ಸ್ವಾಗತಿಸಿದರು. ತೇಜೇಶ್ವರ ಕುಂದಲ್ಪಾಡಿ ಸನ್ಮಾನಿತರನ್ನು ಪರಿಚಯಿಸಿದರು. ಮಿಥುನ್ ಕರ್ಲಪ್ಪಾಡಿ ವಂದಿಸಿದರು. ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.







