ಜ.31ರಂದು ಪ್ರೊ ಆ್ಯಮ್ ಗಾಲ್ಫ್ ಟೂರ್ನಮೆಂಟ್

ಮಂಗಳೂರು, ಜ.7: ಪ್ಲಡ್ ಲೈಟಿಂಗ್ ವ್ಯವಸ್ಥೆಯೊಂದಿಗೆ 18 ಹೋಲ್‌ಗಳೊಂದಿಗೆ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಆಗಿ ಪರಿತರ್ವನೆಗೊಂಡಿರುವ ಪಿಲಿಕುಳದ ಗಾಲ್ಫ್ ಕೋರ್ಸ್‌ನಲ್ಲಿ ಜ. 31ರಂದು ಪ್ರೊಆ್ಯಮ್ (ಪ್ರೊಫೆಶನಲ್ ಅಮೆಚೂರ್) ಗಾಲ್ಫ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಿಲಿಕುಳ ಗಾಲ್ಫ್ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ, ವಿಶ್ವಮಟ್ಟದ ಕೋರ್ಸ್ ಸಿದ್ಧತೆ ಮತ್ತು ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯೊಂದಿಗೆ ಪಿಲಿಕುಳ ಗಾಲ್ಫ್ ಕ್ಲಬ್‌ಭಾರತೀಯ ಗಾಲ್ಫ್ ಕ್ರೀಡೆಯಲ್ಲಿ ನವೀನತೆ ಮತ್ತು ಸ್ಪರ್ಧಾತ್ಮಕ ಶ್ರೇಷ್ಟತೆಯನ್ನು ಒಟ್ಟುಗೂಡಿಸಿ ಹೊಸ ಅಧ್ಯಾಯ ಆರಂಭಿಸಲಿದೆ ಎಂದರು.
ಪಿಲಿಕುಳ ಗಾಲ್ಫ್ ಕ್ಲಬ್ ಆತಿಥ್ಯಿದಲ್ಲಿ ನಡೆಯಲಿರುವ ಈ ಹೊನಲು ಬೆಳಕಿನ ಪಂದ್ಯಾಟದಲ್ಲಿ ವೃತ್ತಿಪರ ಗಾಲ್ಫರ್‌ಗಳು ಹಾಗೂ ಅಮೆಚ್ಯೂರ್ ಆಟಗಾರರು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಭಾರತದ 12 ವೃತ್ತಿಪರ ಗಾಲ್ಫರ್‌ಗಳು ತಮ್ಮ ಭಾಗವಹಿಸುವಿಕೆಯನ್ನು ದೃಪಡಿಸಿದ್ದಾರೆ ಎಂದವರು ಹೇಳಿದರು.
ಸ್ಪರ್ಧೆಯನ್ನು ಮೀರಿ ಈ ಟೂರ್ನಮೆಂಟ್ ಕರಾವಳಿ ಕರ್ನಾಟಕದಲ್ಲಿ ಗಾಲ್ಫ್ ಕ್ರೀಡೆಯ ಬೆಳವಣಿಗೆಗೆ ಪಿಲಿಕುಳ ಗಾಲ್ಫ್ ಕ್ವಬ್‌ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಮಂಗಳೂರನ್ನು ಪ್ರಗತಿಶೀಲ ಕ್ರೀಡಾ ತಾಣವಾಗಿ ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಗಿರೀಶ್ ರಾವ್, ನಿತಿನ್ ಶೆಟ್ಟಿ, ಗೌತಮ್ ಪಡಿವಾಳ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
ನವೀಕೃತ ಗಾಲ್ಫ್ ಕೋರ್ಸ್ ಉದ್ಘಾಟನೆಗೆ ಸಿಎಂ, ಡಿಸಿಎಂ ?
ಪಿಲಿಕುಳದಲ್ಲಿ ನವೀಕೃತಗೊಂಡಿರುವ ಗಾಲ್ಫ್ ಕೋರ್ಸ್‌ನ ಉದ್ಘಾಟನೆ ಜ.9ರಂದು ನಿಗದಿಯಾಗಿತ್ತು. ಇದೀಗ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜ.10ರಂದು ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಅವರಿಂದ ಉದ್ಘಾಟನೆಗೆ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮನೋಜ್ ಶೆಟ್ಟಿ ತಿಳಿಸಿದರು.
ವಿಶ್ವದರ್ಜೆಯ ಗಾಲ್ಫ್ ಅಕಾಡೆಮಿ ಸ್ಥಾಪನೆಗೆ ತಯಾರಿ
ಗಾಲ್ಫ್ ಕ್ರೀಡೆಗೆ ಯುವಕರನ್ನು ಮತ್ತಷ್ಟು ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಅಕಾಡೆಮಿಯ ಸದಸ್ಯ ಮೈಕಲ್ ಡಿಸೋಜಾ ಅವರ ಪ್ರಾಯೋಜಕತ್ವದಲ್ಲಿ ಮೂರು ತಿಂಗಳೊಳಗೆ ವಿಶ್ವದರ್ಜೆಯ ಅತ್ಯುನ್ನತ ಗಾಲ್ಫ್ ಅಕಾಡೆಮಿ ಸ್ಥಾಪನೆಗೆ ಪ್ರಯತ್ನ ನಡೆದಿದೆ. ಭಾರತದ 3ನೆ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಪಿಲಿಕುಳದ್ದಾಗಿದೆ. ಸುಮಾರು 60 ಎಕರೆ ಜಾಗದಲ್ಲಿ ಹಚ್ಚ ಹಸಿರಿನ ಹೊದಿಕೆಯೊಂದಿಗೆ ಗಾಲ್ಫ್ ಕೋರ್ಸ್ ರೂಪಗೊಂಡಿದ್ದು, ವಿಶ್ವ ಮಟ್ಟದ ಟೊರೊ ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿದೆ. 4.2 ಕಿ.ಮೀ. ಕಾರ್ಟ್ ಪಾತ್‌ನಲ್ಲಿ ಓಡಾಡಲು 10 ವಿದ್ಯುತ್ ಬಗ್ಗೀಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕ್ಲಬ್‌ನ ಹೊರಾಂಗಣದಲ್ಲಿ ಶುಭ ಸಮಾರಂಭಗಳಿಗೆ 20,000 ಚದರ ಅಡಿ ವಿಸ್ತೀರ್ಣದ ಹಚ್ಚ ಹಸಿರಿನ ಸ್ಥಳವನ್ನು ಹೊಂದಿದೆ. ಗಾಲ್ಫ್ ಆಟಗಾರರ ಬಳಕೆಗಾಗಿ ಕ್ಲಬ್ 10 ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ.
- ಮನೋಜ್ ಶೆಟ್ಟಿ, ಕ್ಯಾಪ್ಟನ್, ಪಿಲಿಕುಳ ಗಾಲ್ಫ್ ಕ್ಲಬ್







