ಸಂಸತ್ ಭವನದ ಭದ್ರತಾ ವೈಫಲ್ಯ ಖಂಡಿಸಿ ಬಿಸಿರೋಡಿನಲ್ಲಿ ಸಮಾನ ಮನಸ್ಕ ಸಂಘಟನೆಯಿಂದ ಪ್ರತಿಭಟನೆ

ಬಂಟ್ವಾಳ: ಲೋಕಸಭೆ ಅಧಿವೇಶನ ನಡೆಯುವ,ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ದೇವಾಲಯ ಎಂದು ಹೇಳುವ,ಸಂಸತ್ಭವನದ ಒಳಗೆ ಇಬ್ಬರು ಯುವಕರು ಹೊಗೆಡಬ್ಬಿಯನ್ನು ಸಿಡಿಸಿರುವುದನ್ನು,ಸಂಸತ್ ಒಳಗೆ ಚರ್ಚೆ ಮಾಡದೆ, ಬೇರೆಲ್ಲಿ ಚರ್ಚೆ ಮಾಡಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಶ್ನಿಸಿದರು.
ಅವರು ಇಂದು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ಇದರ ನೇತೃತ್ವದಲ್ಲಿ ಕೇಂದ್ರ ಸರ್ಕಾರ, 146 ಸಂಸದರ ಅಮಾನತು ಕ್ರಮವನ್ನು ಖಂಡಿಸಿ, ಸಂಸತ್ ಭವನದ ಭದ್ರತಾ ವೈಫಲ್ಯ ಖಂಡಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಆಗ್ರಹಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಸಂಸತ್ ಭವನದೊಳಗೆ ಭದ್ರತೆ ಲೋಪ ಲೋಪ ಉಂಟಾದ ಸಂದರ್ಭದಲ್ಲಿ, ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ ಸಂಸದರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಮಾರಕ ದಾಳಿ ನಡೆಸಿರುವುದು ಖಂಡನೀಯ ಎಂದರು.
ಮಾನವ ಬಂಧುತ್ವ ವೇದಿಕೆ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್ ಸತೀಶ್ ಕುಮಾರ್ ಮಾತನಾಡಿ, ಡಿ. 13 ರಂದು ಸಮಸತ್ತಿನಲ್ಲಿ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಯುವಕರು ಹೊಗೆ ಡಬ್ಬಿ ತಂದು ಸಿಡಿಸಿದ ಪ್ರಕರಣವನ್ನು ನಿಗೂಡ ಮತ್ತು ಜಟಿಲವನ್ನಾಗಿಸಿರುವ ಕೇಂದ್ರ ಸರ್ಕಾರ, ದೇಶದ ಜನತೆಯ ದಿಕ್ಕು ತಪ್ಪಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾದ, ಚರ್ಚೆ ಸಂವಾದಗಳನ್ನು ಮೊದಲು ಮುಗಿಸುವ ಯತ್ನ ನಡೆಸಿದೆ ಎಂದರು.
ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ರಾಜ್ಯ ಕಾರ್ಯದರ್ಶಿ ದಾನಿಶ್ ಚೆಂಡಾಡಿ ಮಾತನಾಡಿ, ಸಂಸತ್ ಭವನ ಉದ್ಘಾಟನೆಯ ಸಂದರ್ಭದಲ್ಲಿ ನಮ್ಮ ಪ್ರಧಾನ ಸೇವಕರು ಜಗತ್ತಿನಲ್ಲೇ ಸಂಸತ್ ಭವನ ಸುರಕ್ಷಿತವಾಗಿದೆ ಎಂದಿದ್ದರು. ಭದ್ರತಾ ಲೋಪ ಉಂಟಾದಾಗ ಅವರು , ಈ ಬಗ್ಗೆ ಪ್ರಶ್ನೆ ಮಾಡಿದ ಸಂಸದರನ್ನೇ ಅಮಾನತು ಮಾಡುವ ಮೂಲಕ ಪಲಾಯನ ಮಾಡಿದ್ದಾರೆ ಎಂದರು.
ಈ ಸಭೆಯಲ್ಲಿ ಸಂಘಟನೆಯ ನಾಯಕ ಬಿ. ಶೇಖರ್ ಮಾತನಾಡಿದರು. ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಸುದೀಪ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಸುದರ್ಶನ್ ಜೈನ್, ಅಬ್ಬಾಸ್ ಆಲಿ, ಉಪಸ್ಥಿತರಿದ್ದರು.
ಪ್ರತಿಭಟನೆ ನೇತೃತ್ವವನ್ನು ಸಮಾನ ಮನಸ್ಕರ ಸಂಘಟನೆಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಪಂಜಿಕಲ್ಲು, ಸಂಘಟನೆಯ ಪ್ರಧಾನ ಸಂಚಾಲಕ ಎಂ.ಎಚ್ ಮುಸ್ತಫ, ಮಾಜಿ ಅಧ್ಯಕ್ಷ ಪ್ರಕಾಶ್ ಬಿ ಶೆಟ್ಟಿ ಶ್ರೀ ಶೈಲ ತುಂಬೆ, ಪ್ರಮುಖರಾದ ರಾಜಾ ಚೆಂಡ್ತಿಮಾರ್,ಕೇಶವ ಪೂಜಾರಿ ಪಂಜಿಕಲ್ಲು, ಬಿ.ಎಂ. ಪ್ರಭಾಕರ ದೈವಗುಡ್ಡೆ, ಇಬ್ರಾಹಿಂ ಉಳಿ, SIO ಸಂಘಟನೆಯ ರಿಜ್ವಾನ್, ಜಮಾತೆ ಇಸ್ಲಾಂ ಹಿಂದ್ ನ ಅಬ್ದುಲ್ಲಾ ಚೆಂಡಾಡಿ, ಅವ್ವಾ ಜುಮ್ಮಾ ಮಸ್ಜಿದ್ ನ ಬಿ.ಮೊಹಮ್ಮದ್, ಎಐಟಿಯುಸಿ ಮುಖಂಡರುಗಳಾದ ವಿ.ಕುಕ್ಯಾನ್, ಎಂ.ಕರುಣಾಕರ, ಕೆ.ತಿಮ್ಮಪ್ಪ, ಮಾನವ ಬಂಧುತ್ವ ವೇದಿಕೆಯ ಮ್ಯಾಕ್ಸಿಂ ಕುಕ್ಕಾಜೆ, ಲೋಕೇಶ್ ಸುವರ್ಣ, AIYF ನ ಶ್ರೀನಿವಾಸ ಭಂಡಾರಿ, ಮ್ಯಾಥ್ಯೂ, ಮೋಹನ ಅರಳ, ಶೇಖರ್ ಬಿಯಪಾದೆ, ಉಮ್ಮರ್ ಕುಂಞ ಸಾಲೆತ್ತೂರು, NFIW ದ ಸಂಗಾತಿಗಳಾದ ಶಮಿತಾ, ಮಮತಾ, ಕೇಶವತಿ, ಮೋಹಿನಿ ವಹಿಸಿದ್ದರು.







