ಜಾಗೃತಿ ನಡಿಗೆ ಜಾಥಾದಿಂದ ಜನಜಾಗೃತಿ: ಡಾ.ಎಚ್.ಆರ್.ತಿಮ್ಮಯ್ಯ

ಮಂಗಳೂರು, ಡಿ.1: ಸಮಾಜದ ಆರೋಗ್ಯ ರಕ್ಷಣೆ ಸರ್ವರ ಜವಾಬ್ದಾರಿಯಾಗಿದ್ದು, ಜಾಗೃತಿ ನಡಿಗೆ ಜಾಥದಂತಹ ಕಾರ್ಯಕ್ರಮದಿಂದ ಜನಜಾಗೃತಿ ಮೂಡಿಸಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್ ಆರ್ ತಿಮ್ಮಯ್ಯ ಹೇಳಿದರು.
ದ.ಕ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಯನ್ಸ್ ಕ್ಲಬ್ ಕಾಟಿಪಳ್ಳ- ಕೃಷ್ಣಾಪುರ, ನ್ಯೂಬರ್ಗ್ ಆನಂದ್ ರೆಫರೆನ್ಸ್ ಲ್ಯಾಬೋರೇಟರೀಸ್ ಮಂಗಳೂರು ಸಹಯೋಗದಲ್ಲಿ ಯೆನೆಪೊಯ ಕಾಲೇಜು, ಕೆನರಾ ಕಾಲೇಜು ಮಂಗಳೂರು ಹಾಗೂ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ಸಹಭಾಗಿತ್ವದಲ್ಲಿ ಆಯೋಜಿಸಲಾದ ವಿಶ್ವ ಮಧುಮೇಹ ಮತ್ತು ವಿಶ್ವ ಏಡ್ಸ್ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧುನಿಕತೆಯಲ್ಲಿರುವ ಈ ಸಮಾಜದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಆಧುನಿಕ ಜೀವನಶೈಲಿಯಿಂದ ಬರುವ ಮಧುಮೇಹದಂತಹ ಕಾಯೆಲೆಗಳನ್ನು ತಡೆಗಟ್ಟುವ ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ. ನಡಿಗೆ ಮನುಷ್ಯ ಜೀವನಕ್ಕೆ ಅತಿ ಅಗತ್ಯವಿದ್ದು, ವ್ಯಾಯಾಮದೊಂದಿಗೆ ಸೂರ್ಯರಶ್ಮಿ ದೇಹಕ್ಕೆ ಸ್ಪರ್ಶಿಸುವುದರಿಂದ ಶರೀರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು.
ಲಯನ್ಸ್ ಜಿಲ್ಲಾ ಉಪ ಗವರ್ನರ್ ಕುಡುಪಿ ಅರವಿಂದ ಶೆಣೈ ಮಾತನಾಡಿ, ಆಧುನಿಕ ಜೀವನಶೈಲಿ ಅನುಸರಿಸಿಕೊಂಡು ವಿವಿಧ ರೋಗಗಳನ್ನು ಆಹ್ವಾನಿಸುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಉತ್ತಮ ಆರೋಗ್ಯಕ್ಕಾಗಿ ನಿಯಮಿತ ವ್ಯಾಯಾಮದ ಜತೆಗೆ ಜಾಗೃತಿ ಅತಿ ಅಗತ್ಯ ಎಂದರು.
ಎಸ್ ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ತಾರನಾಥ್, ಕೆನರಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರೇಮಲತಾ ವಿ., ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಬದ್ರುದ್ದೀನ್, ಲಯನ್ಸ್ ಕ್ಲಬ್ ಕಾಟಿಪಳ್ಳ- ಕೃಷ್ಣಾಪುರ ಇದರ ಅಧ್ಯಕ್ಷ ದೀಪಕ್ ಪೆರ್ಮುದೆ, ನ್ಯೂಬರ್ಗ್ ಆನಂದ್ ರೆಫರೆನ್ಸ್ ಲ್ಯಾಬೋರೇಟರೀಸ್ ನ ಪ್ರಾದೇಶಿಕ ಮಾರುಕಟ್ಟೆ ನಿರ್ವಾಹಕ ಯೋಗಾನಂದ, ಎನ್ನೆಸ್ಸೆಸ್ ಅಧಿಕಾರಿಗಳಾದ ಸೀಮಾ ಪ್ರಭು ಹಾಗೂ ಎನ್. ಕೀರ್ತನಾ ಭಟ್, ಯೆನೆಪೊಯ ಕಾಲೇಜು ಪಿ.ಆರ್.ಓ. ಡೈಸಿ ಡಿಸೋಜ, ಲಯನ್ಸ್ ಕ್ಲಬ್ ಸದಸ್ಯರಾದ ಸೀತಾರಾಮ್ ರೈ, ಶಿವಪ್ರಸಾದ್ ಬಾಳ, ಮಾಧವ ಶೆಟ್ಟಿ ಬಾಳ, ಪುಷ್ಪರಾಜ್ ಶೆಟ್ಟಿ ಬಾಳ, ಉಮಾನಾಥ ಅಮೀನ್, ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.
ನ್ಯೂಬರ್ಗ್ ಆನಂದ್ ರೆಫರೆನ್ಸ್ ಲ್ಯಾಬೋರೇಟರೀಸ್ ನ ಪಿಆರ್ಒ ಅಕ್ಷಯ ಕೋಟ್ಯಾನ್ ವಂದಿಸಿದರು.
ವಿಶ್ವ ಮಧುಮೇಹ ದಿನ ಮತ್ತು ವಿಶ್ವ ಏಡ್ಸ್ ದಿನದ ಪ್ರಯುಕ್ತ ಬಾವುಟಗುಡ್ಡೆಯಿಂದ ಎಸ್ಡಿಎಂ ಕಾನೂನು ಮಹಾವಿದ್ಯಾಲಯದ ವರೆಗೆ ನಡಿಗೆ ಜಾಥಾ ನಡೆಯಿತು.







