PUTTRU | ಇಎನ್ ಟಿ ಕ್ಲಿನಿಕ್ ಸಿಬ್ಬಂದಿಗೆ ಹಲ್ಲೆ; ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಪುತ್ತೂರು: ನಗರದ ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎನ್ಟಿ ಕ್ಲಿನಿಕ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕ್ಲಿನಿಕ್ ನ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡಿರುವ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹೀಂ ಬಂಧಿತ ಆರೋಪಿ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೆ ಒಳಗಾದವರು.
ಕ್ಲಿನಿಕ್ನಲ್ಲಿ ಪ್ರತಿದಿನ ಬೆಳಗ್ಗೆ ಬೇಗ ಚಿಕಿತ್ಸೆ ಪಡೆಯಲು ಆಗಮಿಸುವವರಿಗೆ ಟೋಕನ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 6:30ರ ಹೊತ್ತಿಗೆ ಬಂದ ವ್ಯಕ್ತಿಯೊಬ್ಬರು ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಸಿಬ್ಬಂದಿ ಟೋಕನ್ ಪ್ರಕಾರವೇ ಕಳುಹಿಸುವುದಾಗ ತಿಳಿಸಿದಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆ ವ್ಯಕ್ತಿ ಕ್ಲಿನಿಕ್ ಸಿಬ್ಬಂದಿ ಮೇಲೆ ನಡೆಸಿದ್ದಲ್ಲದೆ, ಕ್ಲಿನಿಕ್ ನ ಪೀಠೋಪಕರಣಗಳಿಗೂ ಹಾನಿ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕ್ಲಿನಿಕ್ ವೈದ್ಯ ಡಾ.ರಾಮಮೋಹನ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ಆರೋಪಿ ಇಬ್ರಾಹೀಂನನ್ನು ಬಂಧಿಸಿದ್ದಾರೆ.





