ಪುತ್ತೂರು: ವಿವೇಕಾನಂದ ಜಯಂತಿಯಲ್ಲಿ ದ್ವೇಷ ಭಾಷಣ ಆರೋಪ; ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದ ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಸಮಾಜದ ನಾಗರಿಕ ಸಮುದಾಯಗಳ ನಡುವೆ ಪರಸ್ಪರ ದ್ವೇಷ ಉಂಟಾಗುವ ರೀತಿಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಹಾಗೂ ಆ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನೆಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಪುತ್ತೂರು ನಗರ ಠಾಣೆಗೆ ದೂರು ನೀಡಿದೆ.
ದಿನಾಂಕ 12.01.2026ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಹದಿಹರೆಯದ ಬಾಲಕ–ಬಾಲಕಿಯರು ಭಾಗವಹಿಸಿದ್ದ ಸಭೆಯಲ್ಲಿ ಸಮಾಜದ ವಿವಿಧ ನಾಗರಿಕ ಸಮುದಾಯಗಳ ನಡುವೆ ದ್ವೇಷ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕಾರ್ಯಕ್ರಮದ ವಿಡಿಯೋವನ್ನು ‘VIKASANA TV’ (ವಿಕಸನ ಟಿವಿ) ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ 12.01.2026ರಂದು ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಇತಿಹಾಸದ ಘಟನೆಗಳನ್ನು ಉಲ್ಲೇಖಿಸಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಬಗ್ಗೆ ಅವಹೇಳನಕಾರಿ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾಷಣದ ವೇಳೆ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಮೂಡುವಂತೆ ಹೇಳಿಕೆಗಳನ್ನು ನೀಡಿದ್ದು, ಅಲ್ಪಸಂಖ್ಯಾತರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ ಮತಾಂತರದ ವಿಚಾರ ಉಲ್ಲೇಖಿಸಿ ಕ್ರೈಸ್ತ ಸಮುದಾಯವನ್ನು ದೂಷಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಕೆಲವು ಕಲ್ಪಿತ ಘಟನೆಗಳನ್ನು ಉಲ್ಲೇಖಿಸಿ ಸಮಾಜದಲ್ಲಿ ಭಯ ಮತ್ತು ದ್ವೇಷ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.
ಭಾಷಣದ ಕೊನೆಯಲ್ಲಿ ಒನಕೆ ಓಬವ್ವನ ಕಥೆಯನ್ನು ಉಲ್ಲೇಖಿಸಿ, ನಿರ್ದಿಷ್ಟ ಸಮುದಾಯಗಳ ವಿರುದ್ಧ ಹಿಂಸೆಗೆ ಪ್ರಚೋದಿಸುವಂತ ಮಾತುಗಳನ್ನು ಆಡಿರುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸಭೆಯಲ್ಲಿ ಭಾಗವಹಿಸಿದ್ದವರು, ವಿಶೇಷವಾಗಿ ಎಳೆಯ ಪ್ರಾಯದ ವಿದ್ಯಾರ್ಥಿಗಳು ಹಾಗೂ ಯೂಟ್ಯೂಬ್ ಮೂಲಕ ಭಾಷಣ ವೀಕ್ಷಿಸಿದ ಸಾವಿರಾರು ಜನರಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ದ್ವೇಷ ಹುಟ್ಟುವ ಸಾಧ್ಯತೆ ಇದೆ ಎಂದು ಮಾನವ ಬಂಧುತ್ವ ವೇದಿಕೆ ಆರೋಪಿಸಿದೆ.
ಹಿಂದೆಯೇ ದ್ವೇಷ ಭಾಷಣ ಮಾಡಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದ್ದರೂ ಅದನ್ನು ಉಲ್ಲಂಘಿಸಿ ಪುನಃ ದ್ವೇಷ ಭಾಷಣ ಮಾಡಿರುವುದು ಸಮಾಜದಲ್ಲಿ ಅಶಾಂತಿ ಮತ್ತು ಹಿಂಸೆಗೆ ಕಾರಣವಾಗಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದ್ವೇಷ ಭಾಷಣ ಮಾಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಭಾಷಣವನ್ನು ಪ್ರಸಾರ ಮಾಡಿದ ‘VIKASANA TV’ (ವಿಕಸನ ಟಿವಿ) ಯೂಟ್ಯೂಬ್ ಚಾನೆಲ್ ಮೇಲೆಯೂ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿಯ ಪ್ರಧಾನ ಸಂಚಾಲಕ ರಾಮಚಂದ್ರ ಕೆ., ಪ್ರಮುಖರಾದ ಎಂ.ಬಿ. ವಿಶ್ವನಾಥ ರೈ, ಮೌರಿಸ್ ಮಸ್ಕರೇನ್ಹಸ್, ಎಚ್. ಮಹಮ್ಮದ್ ಆಲಿ, ಕೆನ್ಯೂಟ್ ಮಸ್ಕರೇನ್ಹಸ್, ಡಾ. ರಾಜಾರಾಮ್ ಕೆ.ಬಿ., ಬೋಲೋಡಿ ಚಂದ್ರಹಾಸ ರೈ, ಶಶಿಕಿರಣ್ ರೈ, ಅಬ್ದುಲ್ ರೆಹಮಾನ್ ಯೂನಿಕ್, ಉಲ್ಲಾಸ್ ಕೋಟ್ಯಾನ್, ಪ್ರಕಾಶ್ ಗೌಡ ತೆಂಕಿಲ ಸೇರಿದಂತೆ ಇತರರು ಉಪಸ್ಥಿತರಿದ್ದರು.







