ಪುತ್ತೂರು | ವ್ಯಕ್ತಿ ಆತ್ಮಹತ್ಯೆ; ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪುತ್ರಿಯಿಂದ ದೂರು

ಹರೀಶ್
ಪುತ್ತೂರು: ವಿವಾಹಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಇಡ್ಕಿದುನಲ್ಲಿ ನಡೆದಿದೆ.
ಮೃತರನ್ನು ಇಡ್ಕಿದು ನಿವಾಸಿ ಹರೀಶ್(55) ಎಂದು ಗುರುತಿಸಲಾಗಿದೆ. ಈ ಕುರಿತು ಹರೀಶ್ ಅವರ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮೃತರ ಪುತ್ರಿ ನೀಡಿರುವ ದೂರಿನನ್ವಯ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಹರೀಶ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಆದರೆ ಸಂಜೆಯ ವೇಳೆ ಈ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
"ತಂದೆ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ವಾಹನ ಪೈಂಟಿಂಗ್ ಗ್ಯಾರೇಜ್ ನಡೆಸುತ್ತಿದ್ದರು. ಪಕ್ಕದ ಗ್ಯಾರೇಜಿನ ವ್ಯಕ್ತಿಯು ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಮಾನಸಿಕ ಕಿರುಕುಳ ನೀಡಿದ್ದರು. ಈ ಘಟನೆಯ ಕಾರಣದಿಂದಲೇ ಅವರು ಸಾವನ್ನಪ್ಪಿರುವ ಸಂದೇಹ ಇದೆ" ಎಂದು ಅವರ ಪುತ್ರಿ ದೂರಿನಲ್ಲಿ ತಿಳಿಸಿದ್ದಾರೆ.
ಹರೀಶ್ ಅವರು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಅದೇ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಹೇಮಂತ್ ಆಚಾರ್ಯ ಎಂಬವರು ಹರೀಶ್ ಅವರಿಗೆ ಸುಮಾರು ಒಂದು ತಿಂಗಳಿನಿಂದ ವಿನಾ ಕಾರಣ ಬೈಯ್ಯುವುದು ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಹರೀಶ್ ರವರಿಗೆ ಆರೋಪಿ ಹೇಮಂತ್ ಆಚಾರ್ಯ ಹಲ್ಲೆ ಮಾಡಿ, ತಲ್ವಾರು ಹಿಡಿದು ಜೀವ ಬೆದರಿಕೆ ಹಾಕಿರುತ್ತಾರೆ. ಈ ವಿಷಯ ಹರೀಶ್ ಅವರು ತನ್ನ ಮಗಳಿಗೆ ತಿಳಿಸಿದ್ದು, ಆರೋಪಿಯ ಕಿರುಕುಳ ಹಾಗೂ ಹಲ್ಲೆಯಿಂದ ನೊಂದುಕೊಂಡಿದ್ದ ಹರೀಶ್ ರವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಮೃತ ಹರೀಶ್ ರವರ ಮಗಳು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ : 112/2025 ಕಲಂ-108 BNS ರಂತೆ ಪ್ರಕರಣ ದಾಖಲಾಗಿದೆ.
ಹರೀಶ್ ಅವರ ಅಸ್ವಾಭಾವಿಕ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದೆ. ಮೃತರ ಮಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸದ್ರಿ ಪ್ರಕರಣವನ್ನು ಪುತ್ತೂರು ನಗರ ಠಾಣೆಗೆ ಮುಂದಿನ ತನಿಖೆಗಾಗಿ ವರ್ಗಾಯಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ







