ಪುತ್ತೂರು| ಪೋಕ್ಸೋ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ದಂಡ

ಪುತ್ತೂರು: 7 ವರ್ಷಗಳ ಹಿಂದೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕೋ ಪ್ರಕರಣಕ್ಕೆ ಸಂಬಂಧಿಸಿ ಮೈಂದನಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗದಗ ಜಿಲ್ಲೆಯ ರೋಣ ತಾಲೂಕು ನಿವಾಸಿ ಆರೋಪಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂಬಾತನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2007ರ ಅಗಸ್ಟ್ ತಿಂಗಳಲ್ಲಿ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಆಕೆಯ ಮೊಬೈಲ್ ಚಾರ್ಜ್ ಮಾಡಲು ತನ್ನ ಬಾಡಿಗೆ ಮನೆಗೆ ಆಗಮಿಸುವಂತೆ ಪುಸಲಾಯಿಸಿ ಕರೆದೊಯ್ದು ಆಕೆಯ ಇಚ್ಚೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿರುವುದು ಮತ್ತು ಬಳಿಕದ ದಿನಗಳಲ್ಲಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಜೊತೆಗೆ ಬಾಲಕಿಯ ವೈದ್ಯಕೀಯ ತಪಾಸಣೆ, ಡಿಎನ್‌ಎ ಪರೀಕ್ಷೆ ವರದಿಯ ಉಲ್ಲೇಖಿಸಲಾಗಿತ್ತು. ನ್ಯಾಯಾಧೀಶೆ ಸರಿತಾ ಡಿ. ಅವರು ಆರೋಪಿಗೆ ಭಾ.ದಂ.ಸಂ. ಕಲಂ 376 ರಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 20 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ ಮತ್ತು ಭಾ.ದಂ.ಸಂ. ಕಲಂ 506 ರಡಿ ಅಪರಾಧಕ್ಕೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು ರೂ. 5ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 10ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿರುತ್ತಾರೆ. ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ ಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಗೆ ರೂ. 6ಲಕ್ಷ ಪರಿಹಾರ ರೂಪವಾಗಿ ನೀಡಬೇಕೆಂದು ಆದೇಶಿಸಿದೆ. ಸರಕಾರದ ಪರ ಪೋಕೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.







