ಪುತ್ತೂರು | ಅತ್ಯಾಚಾರ, ವಂಚನೆ ಪ್ರಕರಣ; ಸಂತ್ರಸ್ತೆಗೆ ಶಾಸಕ ಅಶೋಕ್ ರೈ ಅವರೇ ಮುಂದೆ ನಿಂತು ಮದುವೆ ಮಾಡಿಸಲಿ : ಮಧು ಆಚಾರ್ಯ
ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ವಿಶ್ವಕರ್ಮ ಸಮಾಜ

ಪುತ್ತೂರು: ಬಿಜೆಪಿ ಮುಖಂಡನ ಪುತ್ರನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಬಳಿಕ ನಾಪತ್ತೆಯಾಗಿರುವ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಗೆ ಶಾಸಕ ಅಶೋಕ್ ರೈ ಅವರು ಮುಂದೆ ನಿಂತು ಮದುವೆ ಮಾಡಿಸಿಕೊಡಬೇಕು ಎಂದು ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಹೇಳಿದರು.
ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ಸಮಾಜದ ತುರ್ತು ಸಭೆಯು ಜು.2 ರಂದು ಕರ್ಮಲ ವಿಶ್ವಕರ್ಮ ಸಮಾಜ ಸೇವಾ ಸಭಾಂಗಣದಲ್ಲಿ ನಡೆಯಿತು.
ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಅವರು ಮಾತನಾಡಿ, ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಸಂತ್ರಸ್ತೆ ಮತ್ತು ಸಂತ್ರಸ್ತೆಯ ತಾಯಿ ನಮ್ಮಲ್ಲಿ ಬಂದಿಲ್ಲ ಎಂಬ ವಿಷಯ ಬೇಡ. ನಮ್ಮ ಹಿಂದೂ ಮಗಳಿಗೆ ಅನ್ಯಾಯ ಆದಾಗ ಸುಮ್ಮನೆ ಕುಳಿತು ಕೊಳ್ಳಲಾಗುವುದಿಲ್ಲ. ಯಾರೋ ಬಿಜೆಪಿ ಮುಖಂಡನ ಮಗ ನಮ್ಮಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾನೆ. ಈ ಕುರಿತು ನಾವು ಮೊದಲು ಆಕೆಯ ಮನೆಗೆ ಹೋಗಿ ಮಾತನಾಡಿ ಬಳಿಕ ಎಸ್ಪಿಗೆ ಮನವಿ ಕೊಡುತ್ತೇವೆ. ನಂತರ ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ಆರೋಪಿಯ ಮನೆ ಮುಂದೆ ಮತ್ತು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಶಾಸಕರೇ ಖುದ್ದು ನಿಂತು ಮದುವೆ ಮಾಡಿಸಲಿ:
ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಶಾಸಕರ ಮನವಿಯಂತೆ ಮದುವೆ ಮಾತುಕತೆ ಮತ್ತು ಮುಚ್ಚಳಿಕೆಯನ್ನು ಆರೋಪಿ ಕೊಟ್ಟಿದ್ದಾನೆ. ಆ ಬಳಿಕ ಯುವಕ ಮದುವೆ ಒಪ್ಪದೆ ಮೋಸ ಮಾಡಿದ್ದಾನೆ. ಈಗ ನಮ್ಮ ಶಾಸಕರೇ ಖುದ್ದು ನಿಂತು ಅವರಿಗೆ ಮದುವೆ ಮಾಡಿ ಕೊಡಬೇಕು. ಇಲ್ಲದಿದ್ದರೆ ವಿಶ್ವಕರ್ಮ ಸಮುದಾಯದಿಂದ ಸಂತ್ರಸ್ತೆಗೆ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದು ಮಧು ಆಚಾರ್ಯ ಹೇಳಿದರು.
ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಖಂಡಿತಾ ಆಗುತ್ತದೆ :
ರಾಜಕೀಯ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವ ಸೀಟ್ ಕೊಡುವುದಿಲ್ಲ. ನಮಗೆ ದೊಡ್ಡ ಅನ್ಯಾಯ ಆಗಿದೆ. ವಿಶ್ವಕರ್ಮ ಸಮಾಜದವರು ಅಂದ್ರೆ ಅಷ್ಟೊಂದು ಕೀಳು ಭಾವನೆ ಏಕೆ? ಆರೋಪಿಯ ತಂದೆ ಬಿಜೆಪಿ ಮುಖಂಡರಾಗಿರಬಹುದು, ಜ್ಯೋತಿಷಿ ಆಗಿರಬಹುದು, ದೇವಸ್ಥಾನದಲ್ಲಿ ಇರಬಹುದು. ನಾವೆಲ್ಲ ಒಗ್ಗಟ್ಟಿನಲ್ಲಿರಬೇಕು. ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಖಂಡಿತಾ ಆಗುತ್ತದೆ ಎಂದು ಮಧು ಆಚಾರ್ಯ ಹೇಳಿದರು.
ಈ ವೇಳೆ ಅವಿಭವಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನಕಾರ್ಯದರ್ಶಿ ಮುರಳಿಧರ ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಹರ್ಷವರ್ದನ್ ನಿಟ್ಟೆ, ಜಯರಾಮ ಆಚಾರ್ಯ ಸಾಲಿಗ್ರಾಮ, ಜಯರಾಮ ಆಚಾರ್ಯ ಕುಲಾಯಿ, ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಆಚಾರ್ಯಕಾಣಿಯೂರು, ವಿಶ್ವಕರ್ಮ ಬೀರಮಲೆ ಅಧ್ಯಕ್ಷ ಗಂಗಾದರ ಆಚಾರ್ಯ , ಕೋಶಾಧಿಕಾರಿ ನಿರಂಜನ ಆಚಾರ್ಯ, ಪುತ್ತೂರು ವಿಶ್ವಕರ್ಮ ಸಮಾಜ ಸಭಾ ಸುರೇಂದ್ರ ಆಚಾರ್ಯ , ಯುವಮಿಲನ ಅಧ್ಯಕ್ಷ ಹರೀಶ್ ಆಚಾರ್ಯ , ಅನೆಗುಂದಿ ಗುರುದೇವ ಪರಿಷತ್ ಪುತ್ತೂರು ಸಮಿತಿ ಅಧ್ಯಕ್ಷ ವಿ ಪುರುಷೋತ್ತಮ ಆಚಾರ್ಯ, ಉಮೇಶ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಇಂದಿರ ಪುರುಷೋತ್ತಮ ಆಚಾರ್ಯ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ, ಪುರಸಭೆ ಮಾಜಿ ಸದಸ್ಯ ಉದಯ ಆಚಾರ್ಯ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.







