ಪುತ್ತೂರು | ಅತ್ಯಾಚಾರ, ವಂಚನೆ ಪ್ರಕರಣ; ಸಂತ್ರಸ್ತೆಗೆ ನ್ಯಾಯ ಒದಗಿಸಿ : ಜನವಾದಿ ಮಹಿಳಾ ಸಂಘಟನೆ ಆಗ್ರಹ

ಸಾಂದರ್ಭಿಕ ಚಿತ್ರ | PC : freepik.com
ಪುತ್ತೂರು : ಬಿಜೆಪಿ ಮುಖಂಡನ ಪುತ್ರನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಬಳಿಕ ನಾಪತ್ತೆಯಾಗಿರುವ ಪ್ರಕರಣದಲ್ಲಿ ಸಂತ್ರಸ್ತ ವಿದ್ಯಾರ್ಥಿನಿಗೆ ಜಗನ್ನಿವಾಸ ರಾವ್ ಕುಟುಂಬ ಮದುವೆಗೆ ನಿರಾಕರಿಸಿ ವಂಚಿಸಿರುವುದು ಮತ್ತು ಗರ್ಭಪಾತಕ್ಕೆ ಒತ್ತಾಯಿಸಿ ಬೆದರಿಸಿರುವ ಘಟನೆಯನ್ನು ಜನವಾದಿ ಮಹಿಳಾ ಸಂಘಟನೆ ಬಲವಾಗಿ ಖಂಡಿಸಿದೆ.
ಈ ಪ್ರಕರಣವು ಬಿಜೆಪಿ, ಸಂಘ ಪರಿವಾರದ ಮುಖವಾಡಗಳನ್ನೂ ಬಯಲಿಗೆ ತಂದಿದೆ. ಆರೋಪಿ ಭಿನ್ನ ಧರ್ಮಕ್ಕೆ ಸೇರಿದ್ದಲ್ಲಿ ಸಂತ್ರಸ್ತ ಮಹಿಳೆಯರ ಪರ ವೀರಾವೇಶದಿಂದ ಬೀದಿಗಿಳಿಯುವ, ಹಿಂಸಾತ್ಮಕ ಪ್ರತಿಭಟನೆಗೆ ಕುಮ್ಮಕ್ಕು ಕೊಡುವ, ಮಹಿಳೆ, ಮಾತೆ ಎಂದು ಭಾಷಣ ಬಿಗಿಯುವ ಬಿಜೆಪಿ ಮುಖಂಡರು ಪುತ್ತೂರಿನ ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕನ ಕುಟುಂಬದಿಂದಲೆ ಸ್ವ ಧರ್ಮದ ಹೆಣ್ಣು ಮಗಳಿಗೆ ಅನ್ಯಾಯ ಆದರೂ ತುಟಿ ಬಿಚ್ಚದಿರುವುದು, ಪರಿಹಾರ ಧನ ಪಡೆದು ಗರ್ಭಪಾತ ಮಾಡಿಸಿಕೊಳ್ಳಲು, ದೂರು ದಾಖಲಿಸದೆ ಇರಲು ಒತ್ತಾಯ ಮಾಡಿರುವುದು ಬಿಜೆಪಿ ಪರಿವಾರದ ಅಸಲಿ ಮುಖವಾಡವನ್ನು ಬಹಿರಂಗಗೊಳಿಸಿದೆ ಎಂದು ಜನವಾದಿ ಮಹಿಳಾ ಸಂಘ ಕಟುವಾಗಿ ಟೀಕಿಸಿದೆ.
ಸಂತ್ರಸ್ತ ವಿದ್ಯಾರ್ಥಿನಿ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ಜನವಾದಿ ಮಹಿಳಾ ಸಂಘಟನೆ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಜನವಾದಿ ಮಹಿಳಾ ಸಂಘ ತಿಳಿಸಿದೆ.
ಪೊಲೀಸ್ ಇಲಾಖೆಯು ಯಾವುದೇ ಪ್ರಭಾವಕ್ಕೆ ಮಣಿಯದೆ ಕೃಷ್ಣ ರಾವ್ ಹಾಗು ಆತನ ಪೋಷಕರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳಬೇಕು. ರಾಜಿ ಪಂಚಾಯತಿಯ ನೆಪದಲ್ಲಿ ಹಣ ಪಡೆದು ಗರ್ಭಪಾತ ಮಾಡಿಸಿಕೊಳ್ಳುವಂತೆ, ಮದುವೆಯ ಬೇಡಿಕೆ ಇಡದಂತೆ ವಿದ್ಯಾರ್ಥಿನಿಯ ಕುಟುಂಬವನ್ನು ಒತ್ತಾಯಿಸಿದ ಸಂಘ ಪರಿವಾರದ ನಾಯಕರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿಸುವಂತೆ ಜನವಾದಿ ಮಹಿಳಾ ಸಂಘಟನೆ ದ.ಕ. ಜಿಲ್ಲಾ ಸಮಿತಿ ಪೊಲೀಸ್ ವರಿಷ್ಟಾಧಿಕಾರಿಯನ್ನು ಆಗ್ರಹಿಸಿದೆ.







