ಬ್ಯಾರಿ ಅಧ್ಯಯನ ಪೀಠದ ವತಿಯಿಂದ ರಸಪ್ರಶ್ನೆ ಸ್ಪರ್ಧೆ

ಮಂಗಳೂರು,ನ.12: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಪದವಿ ಮಟ್ಟದ ಬ್ಯಾರಿ ಭಾಷಾ ರಸಪ್ರಶ್ನೆ ಸ್ಪರ್ಧೆ-2023 ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಶಾಂತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಯು.ಎ. ಅಬ್ದುಲ್ ಕರೀಂ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಬ್ಯಾರಿ ಸಮುದಾಯ ವಿಶಿಷ್ಟ ಸಮುದಾಯವಾಗಿದೆ. ಈ ಭಾಷೆಯಲ್ಲಿರುವ ಅನೇಕ ಪದಗಳು ಈಗ ಮಾಯವಾಗಿದೆ. ಹಾಗಾಗಿ ಬ್ಯಾರಿ ಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಆಯಿಶಾ ಅಸ್ಮಿನ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಮಾಜಿ ಸದಸ್ಯ ಶಂಶುದ್ದೀನ್ ಮಡಿಕೇರಿ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿ ಕೊಟ್ಟರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಖಾಲಿದ್ ತಣ್ಣೀರುಬಾವಿ, ಬಶೀರ್ ಬೈಕಂಪಾಡಿ ಉಪಸ್ಥಿತರಿದ್ದರು.
ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಸ್ವಾಗತಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಡಾ. ಇಸ್ಮಾಯೀಲ್ ಎನ್. ವಂದಿಸಿದರು. ಮುಮ್ತಾಝ್ ಕಾರ್ಯಕ್ರಮ ನಿರೂಪಿಸಿದರು.







