ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆ
ಕಡಲ್ಕೊರೆತದ ಭೀತಿ, ಜಾಸ್ತಿಯಾದ ಅಲೆಯ ಅಬ್ಬರ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಬುಧವಾರ ಬೆಳಗ್ಗೆ ಮಳೆ ಜೋರಾಗಿದ್ದರೆ ಆನಂತರ ಮಳೆಯ ಆರ್ಭಟ ಕಡಿಮೆಯಾಗಿದ್ದರೂ, ಉಳ್ಳಾಲದ ಬಟಪಾಡಿ ಸೇರಿದಂತೆ ಸಮುದ್ರ ತೀರದಲ್ಲಿ ಹಲವಡೆ ಕಡಲ್ಕೊರೆತದ ಭೀತಿ ಉಂಟಾಗಿದೆ.
ಅರಬ್ಬಿ ವಾಯುಭಾರ ಕುಸಿತದ ಕಾರಣದಿಂದಾಗಿ ಮಳೆಯೊಂದಿಗೆ ಗಾಳಿಯಿಂದಾಗಿ ಸಮುದ್ರದಲ್ಲಿ ಅಲೆಯ ಅಬ್ಬರ ಜಾಸ್ತಿಯಾಗಿದೆ.
ಮಂಗಳವಾರ ಮಳೆಯಿಂದ ಅಲ್ಲಲ್ಲಿ ಅನಾಹುತ ಉಂಟಾಗಿರುವುದು ವರದಿಯಾಗಿತ್ತು. ಮುಂದುವರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಕೃತಕ ನೆರೆ ಕಾಣಿಸಿಕೊಂಡಿರುವುದು ವರದಿಯಾಗಿದೆ.
ಬೆಳಗ್ಗೆ ಬಿರುಸಾಗಿದ್ದ ಮಳೆ ಮತ್ತೆ ಕಡಿಮೆಯಾಗಿ ಸ್ವಲ್ಪ ಹೊತ್ತು ಬಿಸಿಲು ಇತ್ತು. ಆನಂತರ ಮೋಡ ಮುಸುಕಿದ ವಾತಾವರಣ ಕಂಡು ಬಂತು.
ಬೆಳಗ್ಗೆ 8:30ರ ತನಕ ಜಿಲ್ಲೆಯ ಮಂಗಳೂರಿನ ನೀರ್‌ಮಾರ್ಗದಲ್ಲಿ ಗರಿಷ್ಠ 157 ಮಿ.ಮೀ ಮಳೆಯಾಗಿದೆ. ಬಂಟ್ವಾಳದ ಮೇರಮಜಲು 147 ಮೀ.ಮೀ, ಉಳ್ಳಾದ ಕೋಟೆಕಾರ್ 128 ಮಿ.ಮೀ, ಬಂಟ್ವಾಳದ ಪುದು 126ಮಿ.ಮೀ, ಬಂಟ್ವಾಳದ ಬಡಗಬೆಳ್ಳೂರು 120.5 ಮಿ.ಮೀ, ಉಳ್ಳಾದ ತಲಪಾಡಿ 115 ಮಿ.ಮೀ, ಮೂಲ್ಕಿಯ ಐಕಳ 108 ಮಿ.ಮೀ, ಉಳ್ಳಾಲದ ಮುನ್ನೂರ್ 107.5 ಮೀ.ಮೀ, ಬಂಟ್ವಾಳದ ಅಮ್ಟಾಡಿ 107 ಮಿ.ಮೀ, ರಾಯಿ 101ಮಿ.ಮೀ ಮಳೆ ದಾಖಲಾಗಿದೆ. ಬಂಟ್ವಾಳದ ವಿಟ್ಲಪಡ್ನೂರಿನಲ್ಲಿ ಕನಿಷ್ಠ ಮಳೆ (39.5 ಮಿ.ಮೀ ) ದಾಖಲಾಗಿರುವುದು ವರದಿಯಾಗಿದೆ.