ಬಂಟ್ವಾಳ : ಬಾರೀ ಗಾಳಿ ಮಳೆ; ಮನೆಗಳಿಗೆ ಹಾನಿ

ಬಂಟ್ವಾಳ : ಬಾರೀ ಗಾಳಿ ಮಳೆಗೆ ತಾಲೂಕಿನ ವಿವಿಧ ಕಡೆಗಳಲ್ಲಿ ಅಪಾರ ಹಾನಿಯಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆಯ ತಡೆ ಗೋಡೆ ಕುಸಿದಿದೆ. ಯಾವುದೇ ಜೀವ ಹಾನಿಯಾಗಿಲ್ಲ. ಕಾವಳ ಪಡೂರು ಗ್ರಾಮದ ಕೈಲಾರು ಎಂಬಲ್ಲಿ ಅಬೂಬಕ್ಕರ್ ಸಿದ್ದಿಕ್ ಹಾಗೂ ಅಶ್ರಫ್ ಎಂಬವರ ಮನೆಯ ಪಕ್ಕದ ಆವರಣ ಗೋಡೆ ಕುಸಿದಿದೆ. ಕಳ್ಳಿಗೆ ಗ್ರಾಮದ ಜೂಲಿಯನ ಪಿಂಟೋ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಪಂಜಿಕಲ್ಲು ಗ್ರಾಮದ ಪುಂಚೋಡಿ ಎಂಬಲ್ಲಿ ರಮೇಶ ಎಂಬವರ ಮನೆಯ ಬದಿಯಲ್ಲಿರುವ ಗುಡ್ಡ ಜರಿದಿದೆ. ಪಂಜಿಕಲ್ಲು ಗ್ರಾಮದ ಕೆಳಗಿನ ಪಂಜಿಕಲ್ಲು ಎಂಬಲ್ಲಿ ಭಾಗ್ಯ ಎಂಬವರ ಮನೆಯ ಕಂಪೌಂಡ್ ಕುಸಿದಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.
ಬಿ.ಮೂಡ ಗ್ರಾಮದ ಗಂಗಾಧರ ಎಂಬವರ ಮನೆಯ ಮೇಲೆ ಮರ ಬಿದ್ದಿದ್ದು ಆಂಶಿಕ ಹಾನಿಯಾಗಿರುತ್ತದೆ. ಮರವನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಲಾಗಿದೆ. ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ಹನೀಫ್ ರವರ ಮನೆ ಬದಿ ಕಾಂಪೌಂಡ್ ಕುಸಿದಿದೆ. ಅಮ್ಮುಂಜೆ ಗ್ರಾಮದಲ್ಲಿ ತಡೆಗೋಡೆ ಕುಸಿದು ಸುಮಲತಾ ಎಂಬವರ ಮನೆಯ ಅಡಿಪಾಯ ಭಾಗಶಃ ಹಾನಿ ಆಗಿರುತ್ತದೆ.
ನೇತ್ರಾವತಿ ನದಿ ಮಟ್ಟದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಯಥಾಸ್ಥಿತಿ ಮುಂದುವರಿದಿದೆ ಎಂದು ಬಂಟ್ವಾಳ ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.