ಕಾಮಗಾರಿ ವಿಳಂಬಕ್ಕೆ ಮಳೆಯ ಸಬೂಬು ಬೇಡ: ಅಧಿಕಾರಿಗಳಿಗೆ ದ.ಕ. ಜಿಪಂ ಸಿಇಒ ಎಚ್ಚರಿಕೆ

ಮಂಗಳೂರು, ಜು.13: ಟೆಂಡರ್ ಷರತ್ತಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಾದ ಸಮಯವನ್ನು ಎಲ್ಲಾ ರೀತಿಯ ತಾಂತ್ರಿಕ, ಸೌಲಭ್ಯಗಳು, ಹವಾಮಾನವನ್ನು ಪರಿಗಣಿಸಿಯೇ ನೀಡಲಾಗಿರುತ್ತದೆ. ಹಾಗಿರುವಾಗ ಕಾಮಗಾರಿ ವಿಳಂಬಕ್ಕೆ ಮಳೆಯ ಸಬೂಬು ನೀಡುವುದನ್ನು ಒಪ್ಪಿಕೊಳ್ಳಲಾಗದು. ಇದು ಕೊನೆಯ ಎಚ್ಚರಿಕೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಸ್ಪಷ್ಟಪಡಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯ್ ವ್ಯಾಪ್ತಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಜಲಜೀವನ್ ಮಿಷನ್ನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.
ಜಲಜೀವನ್ 36 ಕಾಮಗಾರಿಗಳು ಮಿಷನ್ನಡಿ ನಿಗದಿತ ಅವಧಿಗಿಂತ ವಿಳಂಬವಾಗಿರಲು ಸ್ಥಳದ ತಕರಾರು, ಮಳೆ ಕಾರಣ ಎಂಬ ಸಬೂಬು ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಾ.ಆನಂದ್, ಇಂತಹ ಕಾರಣಗಳನ್ನು ಒಪ್ಪಲಾಗದು. ಮಳೆಗಾಲದ ಸಮಸ್ಯೆ ಟೆಂಡರ್ ಶರತ್ತುಗಳಲ್ಲಿ ಮೊದಲೇ ತಿಳಿದು ಸಮಯವನ್ನು ನಿಗದಿಪಡಿಸಲಾಗಿರುತ್ತದೆ. ನಳ್ಳಿ ಜೋಡಣೆ, ಪೈಪ್ಲೈನ್ ಕಾಮಗಾರಿ, ಓವರ್ಹೆಡ್ ಟ್ಯಾಂಕ್ ನಿರ್ಮಾಣ ಮೊದಲಾದ ವಿಭಿನ್ನ ಕಾಮಗಾರಿಗಳಿಗೆ ವಿಭಿನ್ನ ರೀತಿಯ ಕಾರಣಗಳಿಂದ ವಿಳಂಬವಾಗಿರುವ ಸಾಧ್ಯತೆಯಿದ್ದಲ್ಲಿ ಅದನ್ನು ನಿರ್ದಿಷ್ಟವಾಗಿ ನಮೂದಿಸಬೇಕು. ಈ ಸಮಸ್ಯೆಗಳಿಗೆ ಒಂದೆರಡು ತಿಂಗಳು ವಿಳಂಬ ಆಗಬಹುದು. ಆದರೆ 200ರಿಂದ 300 ದಿನಗಳಷ್ಟು ವಿಳಂಬವಾಗಳು ಸಾಧ್ಯವಿಲ್ಲ. ಈ ಬಗ್ಗೆ ಸ್ಪಷ್ಟತೆ ಇರಬೇಕು ಎಂದು ಯೋಜನೆಯ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳಿಗೆ ಜಿಪಂ ಸಿಇಒ ನಿರ್ದೇಶನ ನೀಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗೋಬರ್ ಧನ್ ಯೋಜನೆಯಡಿ ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ಎರಡು ಘಟಕಗಳು ನಿರ್ಮಾಣವಾಗಿದ್ದು, ಪುತ್ತೂರಿನ ಬಡಗನ್ನೂರು ಗ್ರಾ.ಪಂ.ನಲ್ಲಿ ನಿರ್ಮಿಸಲುದ್ದೇಶಿಸಿರುವ ಗೋಬರ್ಧನ ಅನುಷ್ಠಾನಕ್ಕೆ 11.93 ಲಕ್ಷ ರೂ.ಗಳ ಡಿಪಿಆರ್ ಮತ್ತು ಅಂದಾಜುಪಟ್ಟಿ ತಯಾರಿಸಲಾಗಿದ್ದು, ಅನುಮೋದನೆ ನೀಡಬೇಕಾಗಿದೆ ಎಂದು ಯೋಜನೆಯ ಅಧಿಕಾರಿ ನವೀನ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಅಧಿಕಾರಿ ಕೆಂಪೇಗೌಡ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಜಲಜೀವನ್ ಮಿಷನ್ ಯೋಜನೆಯಡಿ ಜಿ.ಪಂ. ವ್ಯಾಪ್ತಿಯ 3,34,185 ಮನೆಗಳಿಗೆ ನೀರಿನ ಸಂಪರ್ಕ ನೀಡಬೇಕಾಗಿದ್ದು, ಈಗಾಗಲೇ 2,90583 ಮನೆಗಳಿಗೆ ನೀರು ಪೂರೈಕೆ ಕಾರ್ಯ ಮಾಡಲಾಗುತ್ತಿದೆ. ಉಳಿದ 43,602 ಮನೆಗಳಿಗೆ ನೀರು ಸಂಪರ್ಕ ಕಾರ್ಯ ವಿವಿಧ ಹಂತಗಳಲ್ಲಿ ಬಾಕಿ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ತಿಳಿಸಿದರು.