ತುಂಬಿ ಹರಿಯುತ್ತಿರುವ ರಾಜಕಾಲುವೆ: ಜೆಪ್ಪಿನಮೊಗರು, ಎಕ್ಕೂರು ಜಲಾವೃತ
20ಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರ

ಮಂಗಳೂರು: ಗುರುವಾರ ಸಂಜೆಯಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜೆಪ್ಪಿನಮೊಗರು, ಎಕ್ಕೂರಿನಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಪ್ರದೇಶ ಜಲಾವೃತಗೊಂಡಿದೆ.
ಎಕ್ಕೂರು ಗಣೇಶ ನಗರ ಎಂಬಲ್ಲಿ 20ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಇಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಅವರು ಕಾಳಜಿ ಕೇಂದ್ರಗಳಿಗೆ ತೆರಳಲು ನಿರಾಕರಿಸಿದ್ದರಿಂದ ಕುಟುಂಬಸ್ಥರ ಮನೆಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಜಿ ಕಾರ್ಪೊರೇಟರ್ ವೀಣಾಮಂಗಳ ತಿಳಿಸಿದ್ದಾರೆ.
ರಾಜಕಾಲುವೆಗೆ ಸಮರ್ಪಕ ತಡೆಗೋಡೆ ನಿರ್ಮಿಸದಿರುವುದರಿಂದ ತುಂಬಿ ಹರಿಯುತ್ತಿರುವ ರಾಜಕಾಲುವೆಯ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಇದರಿಂದ ಈ ಪ್ರದೇಶ ಜಲಾವೃತಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳಕ್ಕೆ ಮಂಗಳೂರು ಮನಪಾ ಆಯುಕ್ತ ರವಿಚಂದ್ರ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ನುಗ್ಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
"ರಾಜಕಾಲುವೆ ಉಕ್ಕಿ ಹರಿಯದಂತೆ ಸಮರ್ಪಕ ತಡೆಗೋಡೆ ನಿರ್ಮಾಣ ಆಗದಿರುವುದರಿಂದ ಇಲ್ಲಿ ಸಮಸ್ಯೆಯಾಗಿದೆ. ಮಳೆಗಾಲ ಆರಂಭಕ್ಕೆ ಮೊದಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಈಗ ಏನು ಕ್ರಮ ಕೈಗೊಳ್ತೀರಿ" ಸ್ಥಳೀಯ ನಿವಾಸಿಗಳು ಮನಪಾ ಆಯುಕ್ತರನ್ನು ತರಾಟೆಗೈದರು.







