ಆ.15ರಂದು ಎಸ್‌ವೈಎಸ್‌ನಿಂದ ರಾಷ್ಟ್ರ ರಕ್ಷಾ ಸಂಗಮ

ಮಂಗಳೂರು: ಸುನ್ನೀ ಯುವ ಜನ ಸಂಘ ಕೇಂದ್ರ ಸಮಿತಿಯ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ದ.ಕ ಜಿಲ್ಲಾ ಎಸ್‌ವೈಎಸ್ ಸಮಿತಿಯಿಂದ ‘ಜಾತ್ಯಾತೀತತೆ ಭಾರತದ ಧರ್ಮ’ ಎಂಬ ವಿಚಾರದ ಕುರಿತಾಗಿ ಆ.15ರಂದು ಸಂಜೆ ದೇರಳಕಟ್ಟೆಯ ಸಿಟಿ ಗ್ರೌಂಡ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮೌಲನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕಳೆದ ಏಳು ದಶಕಗಳಿಂದ ಸಮುದಾಯದ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯವಾದ ಸೇವೆ ಸಲ್ಲಿಸುತ್ತಾ ಬಂದಿರುವ ಎಸ್‌ವೈಎಸ್‌ನ ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಕಲ ಸಿದ್ಧತೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಖಾಝಿ ತ್ವಾಖಾ ಆಹ್ಮದ್ ಮುಸ್ಲಿಯಾರ್, ಝೈನುಲ್ ಆಬಿದೀನ್ ತಂಙಳ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್, ಉಸ್ಮಾನುಲ್ ಫೈಝಿ ಉಸ್ತಾದ್, ಸಯ್ಯಿದ್ ಅಮೀರ್ ತಂಙಳ್ ಹಾಗೂ ವಿಶೇಷ ಅಹ್ವಾನಿತರಾಗಿ ಲಕ್ಷ ದೀಪ ಮಾಜಿ ಸಂಸದ ಹಂದುಲ್ಲಾಹ್ ಸಯೀದ್, ಲಕ್ಮೀಶ ಗಬ್ಲಡ್ಕ, ಫಾ. ಜಯಪ್ರಕಾಶ್ ಡಿಸೋಜ ಆಗಮಿಸಲಿದ್ದಾರೆ. ಮಮ್ಮುಟ್ಟಿ ನಿಝಾಮಿ ಕೇರಳ ಅವರು ಸಂದೇಶ ಭಾಷಣ ನೀಡಲಿರುವರು. ರಾಷ್ಟ್ರ ರಕ್ಷಣೆಯ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಉಮರ್ ದಾರಿಮಿ ಪಟ್ಟೋರಿ, ಸ್ವಾಗತ ಸಮಿತಿ ಚೇರ್ಮನ್ ಅಬೂಬಕರ್ ಹಾಜಿ ದೇರಳಕಟ್ಟೆ, ಸಂಘಟಕ ಮುಸ್ತಫಲ್ ಫೈಝಿ ಕಿನ್ಯ, ಕೋಶಾಧಿಕಾರಿ ಕೆ.ಪಿ. ಅಬ್ದುರ‌್ರಹಮಾನ್ ದಾರಿಮಿ ತಬೂಕ್ ಮತ್ತಿತ್ತರರು ಉಪಸ್ಥಿತರಿದ್ದರು.







