ಬಿ.ಕೆ.ಹರಿಪ್ರಸಾದ್ ರಿಗೆ ಸಚಿವ ಸ್ಥಾನ ನೀಡಲು ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ಒತ್ತಾಯ

ಮಂಗಳೂರು, ಜು.29: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಬಿ.ಕೆ.ಹರಿಪ್ರಸಾದ್ ಅವರ ಪಾತ್ರ ಹಿರಿದಾಗಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಶನಿವಾರ ನಗರದಲ್ಲಿ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಒತ್ತಾಯ ಮಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ. ಈ ಬಗ್ಗೆ ಬಿ.ಕೆ. ಹರಿಪ್ರಸಾದ್ ಇತ್ತೀಚೆಗೆ ನೀಡಿರುವ ಹೇಳಿಕೆ ಸ್ವಾಗತಾರ್ಹವಾಗಿದೆ. ಅವರನ್ನು ಪಕ್ಷದಲ್ಲಿ ಕಡೆಗಣಿಸಿದರೆ ಅವರ ಬೆನ್ನ ಹಿಂದೆ ನಿಂತು ಶಕ್ತಿ ತುಂಬಲು ಸಮುದಾಯ ಸಿದ್ಧವಿದೆ ಎಂದರು.
ಬಿ. ಜನಾರ್ದನ ಪೂಜಾರಿ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರಂತೆ ಬಿ.ಕೆ.ಹರಿಪ್ರಸಾದ್ ಸಮುದಾಯದ ಹಿರಿಯ ನಾಯಕರು. ಅವರನ್ನು ಈ ರೀತಿ ಕಡೆಗಣಿಸಬಾರದು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಹಣ ಮಂಜೂರಾತಿ ಪ್ರಸ್ತಾವ ಮಾಡಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.
ಸೆ.9ರಂದು ಬೆಂಗಳೂರಿನಲ್ಲಿ ಸಮಾವೇಶ
ಅತೀ ಹಿಂದುಳಿದ ವರ್ಗಗಳ (ಎಂಬಿಸಿ) ಸಮಾವೇಶದ ಪೂರ್ವಭಾವಿ ಚಿಂತನಾ ಸಭೆ ಸೆಪ್ಟಂಬರ್ 9ರಂದು ಬೆಂಗಳೂರು ಅರಮನೆ ಮೈದಾನದ ಆವರಣದಲ್ಲಿ ಸಮಾವೇಶದ ಮೂಲಕ ನಡೆಸಲಾಗುವುದು. ಸಮಾಜದ ಸ್ವಾಮೀಜಿ ಡಾ.ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ರಾಷ್ಟ್ರೀಯ ನಾಯಕರಾದ ಕೇಂದ್ರ ಸಚಿವ ಶ್ರೀಪಾದ ಎಸ್ಸೊ ನಾಯಕ್, ತೆಲಂಗಾಣದ ಸಚಿವ ಶ್ರೀನಿವಾಸ್ ಗೌಡ್, ಆಂಧ್ರದ ಸಚಿವ ಜೋಗಿ ರಮೇಶ್, ಕೇರಳದ ಸಚಿವ ಎ.ಕೆ.ಶಶೀಂದ್ರನ್, ಚೆನ್ನೈನ ತಿರುಚೆಂಡೂರು ಅನಿತಾ ರಾಧಾಕೃಷ್ಣನ್ ಮೊದಲಾದವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.