‘ಒಮ್ಮೊಮ್ಮೆ ಅನಿಸಿದ್ದು’ ಅಂಕಣ ಬರಹಗಳ ಪುಸ್ತಕ ಬಿಡುಗಡೆ

ಮಂಗಳೂರು, ಜು.10: ಬಳ್ಕೂರು ಯಕ್ಷ ಕುಸುಮ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಆಶ್ರಯದಲ್ಲಿ ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು ಅವರ ‘ಒಮ್ಮೊಮ್ಮೆ ಅನಿಸಿದ್ದು’ ಅಂಕಣ ಬರಹಗಳ ಪುಸ್ತಕವನ್ನು ಗುರುವಾರ ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪುಟ್ಟಣ ಕುಲಾಲ್ ಪ್ರತಿಸ್ಠಾನದ ಅಧ್ಯಕ್ಷ ಡಾ. ಎಂ.ಅಣ್ಣಯ್ಯ ಕುಲಾಲ್ ಉಳ್ತೂರು, ಹಲವು ವಿಚಾರಗಳಿಗೆ ತನ್ನೊಳಗಿನ ಚಿಂತನೆಯನ್ನು ಸೇರಿಸಿ ಒದುಗರಿಗೆ ಉಣ ಬಡಿಸುವ ಪ್ರಯತ್ನ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ.
ಒಮ್ಮೊಮ್ಮೆ ಅನಿಸಿದ್ದನ್ನು ಹಿಡಿದಿಟ್ಟು, ಬರೆದಿಟ್ಟು ಓದುಗರ ಮುಂದೆ ಇಡುವುದು ಅಷ್ಟು ಸುಲಭವಲ್ಲ. ಆದರೆ ಈ ವಿಚಾರದಲ್ಲಿ ಲೇಖಕರು ಧೈರ್ಯವಾಗಿ ಮುಂದಡಿಯಿಟ್ಟಿದ್ದಾರೆ.ಇದರಲ್ಲಿ ಕಿವಿಮಾತು, ಸರಿ- ತಪ್ಪು, ನ್ಯಾಯ ಅನ್ಯಾಯಗಳ ಬಗ್ಗೆ ತುಲನಾತ್ಮಕ ಚಿಂತನೆ ಇದೆ. ಯುವ ಜನತೆಗೆ ಒಂದಷ್ಟು ಪ್ರೇರಣ ಸಾಹಿತ್ಯ ನೀಡುವಲ್ಲಿ ಇದು ಯಶಸ್ವಿಯಾಗಲಿ. ಇನ್ನಷ್ಟು ನೇರ, ದಿಟ್ಟ ಸ್ಪಷ್ಟ ಬರಹಗಳು ಸಾಹಿತ್ಯ ಕ್ಷೇತ್ರದಲ್ಲಿ ಬರಲಿ ಎಂದರು.
ಲೇಖಕ ಶ್ರೀನಾಥ್ ಬಸ್ರೂರು ಅವರು ಮಾತನಾಡಿ, ಮುಂಜಾವಿನ ನಡಿಗೆತ ಸಮಯದಲ್ಲಿ ಒಮ್ಮೊಮ್ಮೆ ಅನಿಸಿದ, ಹಲವೊಮ್ಮೆ ನೆನಪಾದ, ಕೆಲವು ವಿಷಯಗಳನ್ನು ಬರೆದು ಪುಸ್ತಕರೂಪದಲ್ಲಿ ಇಟ್ಟಿದ್ದೇನೆ. ಇದು ಮೊದಲ ಪ್ರಯತ್ನವಾಗಿದ್ದು, ಓದುಗರ ಪ್ರೀತಿಯ ಹಾರೈಕೆಯ ಅಗತ್ಯವಿದೆ ಎಂದರು.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಅಂಚೆ ಚೀಟಿ ಸಂಗ್ರಾಹಕಿ ವಿದ್ಯಾ ಕಿಶೋರಿ ಬಾಗಲೋಡಿ ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಕರುಣಾಕರ ಬಳ್ಕೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







