'ನಲ್ಮೆಯ ಹರೇಕಳ ಗ್ರಾಮ' ಕೃತಿ ಬಿಡುಗಡೆ

ಕೊಣಾಜೆ: ಹರೇಕಳ ಗ್ರಾಮದಲ್ಲಿ ನೋಬೆಲ್ ಪ್ರಶಸ್ತಿಗೆ ಅರ್ಹರಾದವರು ಇದ್ದು ಇದುವರೆಗೆ ತೆರೆಮರೆಗೆ ಇದ್ದ ಸಾಧಕರನ್ನು ಹೊರ ಜಗತ್ತಿಗೆ ಪರಿಚಯಿ ಸುವ ಕೆಲಸ ಕೃತಿಯ ಮೂಲಕ ನಡೆದಿದೆ ಎಂದು ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಡಾ.ಪ್ರವೀಣ್ ರಾಜ್ ಹೇಳಿದರು.
ಪತ್ರಕರ್ತರಾದ ಹಂಝ ಮಲಾರ್ ಮತ್ತು ಅನ್ಸಾರ್ ಇನೋಳಿ ಸಂಪಾದಕತ್ವದ ಹರೇಕಳ ಗ್ರಾಮದ ಇತಿಹಾಸ, ವಿಶೇಷತೆ, ವೈಭವ, ಸಾಧಕರ ವ್ಯಕ್ತಿ ಪರಿಚಯವನ್ನು ಒಳಗೊಂಡ ‘ನಲ್ಮೆಯ ಹರೇಕಳ ಗ್ರಾಮ’ ಕೃತಿ ರವಿವಾರ ಹರೇಕಳ ಗ್ರಾಮ ಸೌಧದಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ.ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ವಿಶ್ವದ ಗಮನ ಸೆಳೆದಿರುವ ಹರೇಕಳದಲ್ಲಿ ಪವಾಡ ರೀತಿಯ ಪ್ರಗತಿ, ಪರಿವರ್ತನೆ ಆಗು ತ್ತಿದ್ದು ಇದಕ್ಕೆ ನಲ್ಮೆಯ ಹರೇಕಳ ಗ್ರಾಮ ಪೂರಕವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮಸ್ಥರಲ್ಲಿ ಜವಾಬ್ದಾರಿ ಹೆಚ್ಚಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಒಂದು ಗ್ರಾಮದ ಕೃತಿ ರಚಿಸುವುದು ಸುಲಭ ವಲ್ಲ. ಜಾತಿ, ಧರ್ಮ, ರಾಜಕೀಯವಿಲ್ಲದೆ ಎಲ್ಲರೂ ಒಂದೇ ಮನಸ್ಸಿನಿಂದ ಒಟ್ಟುಗೂಡಿ ಗ್ರಾಮದ ಕೃತಿ ಬಿಡುಗಡೆಗೊಳಿಸುತ್ತಿರುವುದು ಇಲ್ಲಿನ ವೈಶಿಷ್ಟ್ಯ ಎಂದು ತಿಳಿಸಿದರು.
ಹೈನೋದ್ಯಮಿ ಮೈಮುನಾ ರಾಜ್‌ಕಮಲ್ ಕೃತಿ ಬಿಡುಗಡೆಗೊಳಿಸಿದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಕೊಣಾಜೆ ಠಾಣೆಯ ಉಪನಿರೀಕ್ಷಕ ಅಶೋಕ್, ಮಂಗಳೂರು ವಿಶ್ವವಿದ್ಯಾಲಯ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಪ್ರಶಾಂತ್ ನಾಯ್ಕ್, ಹರೇಕಳ ಪ್ರಕಾಶನದ ಸಲಹೆಗಾರರಾದ ಎಡ್ವರ್ಡ್ ಡಿಸೋಜ, ಮುಸ್ತಫಾ ಮಲಾರ್, ಪಾವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್, ಹಿರಿಯರಾದ ರಾಮ್ ದಾಸ್ ಪೂಂಜ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಅಬ್ದುಲ್ ಸತ್ತಾರ್, ಮಜೀದ್ ಎಂ.ಪಿ., ಅನಿತಾ ಡಿಸೋಜ, ಗುಲಾಬಿ, ಅಬೂಬಕ್ಕರ್ ಸಿದ್ದೀಕ್, ಮಹಮ್ಮದ್ ಅಶ್ರಫ್, ಮಹಮ್ಮದ್ ಹನೀಫ್, ಅನೀಸ್ ರಹ್ಮಾನ್, ಮಹಮ್ಮದ್ ಹನೀಫ್, ಪುಷ್ಪಲತಾ ಶೆಟ್ಟಿ, ಪೂವಕ್ಕ, ರೆಹನಾ, ಜಯಂತಿ, ಪ್ರಿಯಾ ಪಾಯ್ಸ್, ರೆಹನಾ, ಕಾರ್ಯದರ್ಶಿ ತಾರಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಪಿಡಿಓ ಮುತ್ತಪ್ಪ ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







