ಮಂದಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆಯ ದುರಸ್ತಿ ಕಾಮಗಾರಿ
►ವಾಹನ ಸವಾರರು ಹೈರಾಣ ► ಬೆಳಗ್ಗೆ-ಸಂಜೆ ವೇಳೆ ಹೆಚ್ಚಿದ ಸಂಚಾರ ಒತ್ತಡ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ (ಹಳೆಯ ನೇತ್ರಾವತಿ) ಸೇತುವೆಯ (ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ) ದುರಸ್ತಿ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ಸಂಚಾರದ ಒತ್ತಡ ಹೆಚ್ಚುತ್ತಿದ್ದು, ಪ್ರಯಾಣಿಕರ ತಾಳ್ಮೆಯನ್ನು ಜಿಲ್ಲಾಡಳಿತ ಪರೀಕ್ಷಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎ.2ರಿಂದ ಸೇತುವೆಯ ದುರಸ್ತಿ ಕಾಮಗಾರಿ ನಡೆಯುತ್ತಿದೆ. ತಿಂಗಳ ಕಾಲ ಸೇತುವೆ ಬಂದ್ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ಈಗಾಗಲೆ ತಿಳಿಸಿದೆ. ಆದರೆ ಈವರೆಗಿನ ಕಾಮಗಾರಿಯನ್ನು ಅವಲೋಕಿಸಿದಾಗ ಇನ್ನು 15 ದಿನದೊಳಗೆ ಕಾಮಗಾರಿ ಮುಗಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.
ಹಳೆ ಸೇತುವೆಯ ಗರ್ಡರ್‌ನ ಕೆಳಭಾಗದಲ್ಲಿರುವ ಪಿಲ್ಲರ್‌ಗಳಿಗೆ ಬೇರಿಂಗ್ (ಕಾ್ಂರಕಿಟ್) ಗಳನ್ನು ಅಳವಡಿಸಿ ಸೇತುವೆ ಮೇಲ್ಭಾಗದಲ್ಲೂ ದುರಸ್ತಿ ಮಾಡಲಾಗುತ್ತಿದೆ. ಸೇತುವೆಯ ಉತ್ತರ ಭಾಗ (ಎಕ್ಕೂರು ಕಡೆ) ಎರಡು ಪಿಲ್ಲರ್‌ಗಳಿಗೆ 4 ಬೇರಿಂಗ್ ಹಾಗೂ ದಕ್ಷಿಣ ಭಾಗ (ಕಲ್ಲಾಪು ಕಡೆ)ದಲ್ಲಿ 4 ಪಿಲ್ಲರ್‌ಗಳಿಗೆ 8 ಬೇರಿಂಗ್‌ಗಳನ್ನು ಅಳವಡಿಸಲಾಗುತ್ತಿದೆ.
ಆದರೆ 12 ಬೇರಿಂಗ್ ಅಳವಡಿಕೆಗೆ ಕೇವಲ 8 ಮಂದಿ ಸಿಬ್ಬಂದಿ ಮತ್ತು ಒಬ್ಬ ಸೂಪರ್‌ವೈಸರನ್ನು ಮಾತ್ರ ನಿಯೋಜಿಸಲಾಗಿದೆ. ಉತ್ತರ ಮತ್ತು ದಕ್ಷಿಣ ವಿಭಾಗದ ಬೇರಿಂಗ್‌ಗಳನ್ನು ಏಕಕಾಲಕ್ಕೆ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ನಿರ್ಮಿಸಲು ಮತ್ತು ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ರಾತ್ರಿ-ಹಗಲು ಅಥವಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಆದರೆ ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೇಮಿಸಿ ಕೇವಲ ಹಗಲಲ್ಲಿ ಮಾತ್ರ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗಿವೆ.
ಇದು ಹಲವು ರಾಜ್ಯಗಳನ್ನು ಸಂಪರ್ಕಿಸುವ ಇದು ಪ್ರಮುಖ ಹೆದ್ದಾರಿ ಸೇತುವೆಯಾಗಿದ್ದು, ಸದಾ ವಾಹನ ದಟ್ಟನೆಯಿಂದ ಕೂಡಿದೆ. ಟ್ರಕ್, ಲಾರಿಗಳು, ಟ್ಯಾಂಕರ್ ಸಹಿತ ಸರಕು ಸಾಗಾಟ ವಾಹನಗಳು, ಅಂತರ್‌ರಾಜ್ಯ ಬಸ್‌ಗಳು, ಪ್ರವಾಸಿ ವಾಹನಗಳು ಹೆದ್ದಾರಿಯಲ್ಲಿ ನಿರಂತರವಾಗಿ ಸಂಚರಿಸುತ್ತಿವೆ.
ಅಂದಹಾಗೆ, ಹಳೆಯ ಸೇತುವೆ ಮುಚ್ಚಿದ್ದರಿಂದ ವಾಹನ ಸವಾರರು , ಪ್ರಯಾಣಿಕರು ದಿನನಿತ್ಯ ಕನಿಷ್ಠ ಅರ್ಧ ಗಂಟೆಗೂ ಅಧಿಕ ಟ್ರಾಫಿಕ್ ಬ್ಲಾಕ್‌ನಲ್ಲಿ ಸಿಲುಕುವುದು ಸಾಮಾನ್ಯ ಎಂಬಂತಾಗಿದೆ. ಕಳೆದ ಎರಡು ವಾರಗಳಿಂದ ಸಾರ್ವಜನಿಕರಿಗೆ ಇದು ನಿತ್ಯ ಗೋಳಾಗಿದೆ. ಇದರಿಂದ ಆ್ಯಂಬುಲೆನ್ಸ್ ಸಂಚಾರಕ್ಕೂ ಸಮಸ್ಯೆಯಾಗಿದೆ. ವಿಮಾನ, ರೈಲು ನಿಲ್ದಾಣಕ್ಕೆ ತೆರಳುವವರು ಬ್ಲಾಕ್‌ನಿಂದ ನಿಗದಿತ ಸಮಯಕ್ಕೆ ತಲುಪಲಾಗದೆ ಪರಿತಪಿಸುವಂತಾಗಿದೆ.
ಸೇತುವೆಯನ್ನು ಮುಚ್ಚಿರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿರುವ ಸಾರ್ವಜನಿಕರು ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂದರೆ ಹೆದ್ದಾರಿ ದಾಟಲು ಕಷ್ಟಪಡುವಂತಾಗಿದೆ. ತಮ್ಮ ವಾಹನಗಳ ಮೂಲಕ ಹೆದ್ದಾರಿ ಪ್ರವೇಶಿಸಲು ಹಲವು ರೀತಿಯಲ್ಲಿ ಕಸರತ್ತು ಮಾಡಬೇಕಿದೆ ಎಂದು ಸ್ಥಳೀಯರು ದೂರಿದ್ದಾರೆ.
ತೊಕ್ಕೊಟ್ಟು ಕಡೆಯಿಂದ ನಗರಕ್ಕೆ ಬರುವ ವಾಹನಗಳಿಗೆ ಆಡಂ ಕುದ್ರು ಬಳಿ ಡಿವೈಡರನ್ನು ಇರಿಸಲಾಗಿದೆ. ಈ ಮೂಲಕ ವಾಹನಗಳು ವಿರುದ್ಧ ದಿಕ್ಕಿನ ರಸ್ತೆಯನ್ನು ಪ್ರವೇಶಿಸಿ ನೇತ್ರಾವತಿಯ ಹೊಸ ಸೇತುವೆಯಲ್ಲಿ ಸಾಗಿ ಜಪ್ಪಿನಮೊಗರು ಬಳಿ ವಾಪಸ್ ಇನ್ನೊಂದು ಬದಿಯ ರಸ್ತೆಯನ್ನು ಪ್ರವೇಶಿಸಿ ಮಂಗಳೂರು ಕಡೆಗೆ ಸಾಗಿ ಬರಬೇಕಿದೆ. ಇದರಿಂದ ಹೊರರಾಜ್ಯದ ವಾಹನ ಸವಾರರಿಗೆ ಗೊಂದಲಕ್ಕೀಡಾಗುತ್ತಿದ್ದಾರೆ.
ಈ ದುರಸ್ತಿ ಕಾಮಗಾರಿಗೆ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಿದರೆ ಮತ್ತು ರಾತ್ರಿ ಪಾಳಿಯಲ್ಲೂ ಬಿರುಸಿನಿಂದ ಕಾಮಗಾರಿ ನಡೆಸಿದರೆ ಸಾರ್ವಜನಿಕರು, ವಾಹನ ಸವಾರರು ಎದುರಿಸುವ ಸಮಸ್ಯೆ ನೀಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿವೆ.
3 ತಿಂಗಳ ಅಂತರದಲ್ಲಿ ಮತ್ತೆ ಕಾಮಗಾರಿ: ಈ ಸೇತುವೆಯಲ್ಲಿ ಹೊಂಡ-ಗುಂಡಿ ತುಂಬಿದ ಕಾರಣ 2016ರಲ್ಲೂ ಮುಚ್ಚಿ ದುರಸ್ತಿಗೊಳಿಸಲಾಗಿತ್ತು. 2024ರ ಡಿಸೆಂಬರ್‌ನಲ್ಲೂ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆ ಸಂದರ್ಭ ಸೇತುವೆಯಲ್ಲಿ ಬ್ಯಾರಿಕೇಡ್ ಹಾಕಿ, ಒಂದೇ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈಗ 3 ತಿಂಗಳ ಅಂತರದಲ್ಲಿ ಮತ್ತೆ ಸೇತುವೆ ಬಂದ್ ಮಾಡಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
67 ವರ್ಷದ ಹಿಂದಿನ ಸೇತುವೆ :
1958ರಲ್ಲಿ ನಿರ್ಮಾಣವಾದ ಸೇತುವೆ ಇದಾಗಿದೆ. ಇದು 804 ಮೀ. ಉದ್ದವಿದ್ದು 24 ಪಿಲ್ಲರ್‌ಗಳನ್ನು ಒಳಗೊಂಡಿದೆ. ದಶಕಗಳ ಹಿಂದಿನವರೆಗೆ ಈ ಸೇತುವೆಯಲ್ಲಿ ವಾಹನಗಳು ಪರಸ್ಪರ ಎದುರು ಬದುರಾಗಿ ಸಾಗುತ್ತಿದ್ದವು. ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ನೂತನ ಸೇತುವೆಯು ನಿರ್ಮಾಣವಾಗಿತ್ತು. ಆ ಬಳಿಕ ತೊಕ್ಕೊಟ್ಟು ಕಡೆಯಿಂದ ಬರುವ ವಾಹನಗಳು ಮಾತ್ರ ಹಳೆಯ ಸೇತುವೆಯಲ್ಲಿ ಸಂಚರಿಸುತ್ತಿವೆ.
ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸ್ಪೀಕರ್ ಖಾದರ್ ಸೂಚನೆ :
ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಹಳೆಯ ಸೇತುವೆಯ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯ ಜೊತೆ ಮಾತುಕತೆ ನಡೆಸಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಸೇತುವೆಯ ಅಡಿ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ನುರಿತ ತಂಡದ ನಾಲ್ಕೈದು ಜನ ಮಾತ್ರ ನಿಂತು ಕೆಲಸ ಮಾಡುವ ಅವಕಾಶವಿದೆ. ಆದಾಗ್ಯೂ ಎ.25ರೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಸ್ಪೀಕರ್‌ರಿಗೆ ಭರವಸೆ ನೀಡಿದ್ದಾರೆ.