ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ RPF ಜವಾನರ ನೇಮಕಕ್ಕೆ ಮನವಿ

ಮಂಗಳೂರು, ಆ.19: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸದ್ಯ 32 ಆರ್.ಪಿ.ಎಫ್. ಜವಾನರಿದ್ದಾರೆ. ಆದರೆ ಕೆಲಸ ಕಾರ್ಯಗಳ ಒತ್ತಡದಿಂದ ಅವರಿಗೆ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ನಿಲ್ದಾಣದಲ್ಲಿ ಹೆಚ್ಚುವರಿ ಆರ್.ಪಿ.ಎಫ್. ಜವಾನರನ್ನು ನೇಮಿಸಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಾಮನಿರ್ದೇಶಕ ಸದಸ್ಯ ಎಂ. ಅಹ್ಮದ್ ಬಾವಾ ಪಡೀಲ್ ಒತ್ತಾಯಿಸಿದ್ದಾರೆ.
ಪಾಲಕ್ಕಾಡ್ ಡಿವಿಜನ್ನ ಬಿಆರ್ಎಂ ಮುಕುಂದ್ ಆರ್.ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪಾಲಕ್ಕಾಡ್ ಡಿವಿಜನ್ನ ರೈಲ್ವೆ ಯಾತ್ರಿಕರ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮಂಗಳೂರು-ರಾಮೇಶ್ವರಂ ರೈಲು ಗಾಡಿಗೆ ವೇಳಾಪಟ್ಟಿ ಸಿದ್ಧವಾಗಿದೆ. ಹಾಗಾಗಿ ತಕ್ಷಣ ಯಾತ್ರಿಕ ರೈಲನ್ನು ಓಡಿಸಬೇಕು, ವಂದೇ ಭಾರತ್ ಪ್ರಯಾಣಿಕರ ರೈಲು ಕಾಸರಗೋಡಿನವರೆಗೆ ಮಾತ್ರ ಸಂಚರಿಸುತ್ತಿವೆ. ಈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೂ ಚಲಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿರುವ ಅಹ್ಮದ್ ಬಾವಾ ಪಡೀಲ್, ಅಮೃತ್ ಭಾರತ್ ರೈಲ್ವೆ ನಿಲ್ದಾಣದ ಉನ್ನತೀಕರಣದ ಯೋಜನೆಯಲ್ಲಿ ರಾಜ್ಯಕ್ಕೆ 13 ರೈಲು ನಿಲ್ದಾಣಗಳು ಮತ್ತು ಪಾಲಕ್ಕಾಡ್-ಸೇಲಂ ಡಿವಿಜನ್ಗೆ 15 ರೈಲು ನಿಲ್ದಾಣಗಳು ಸಿಕ್ಕಿವೆ. ಈ ಪೈಕಿ ಪಾಲಕ್ಕಾಡ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳ ಉನ್ನತೀಕರಣಕ್ಕೆ ಆಡಳಿತಾತ್ಮಕ ಅನುಮತಿ ಲಭಿಸಿದೆ ಎಂದು ತಿಳಿಸಿದ್ದಾರೆ.







