ಸಾಹಸ ಚಟುವಟಿಕೆಗಳ ಕಲಿಕೆಗೆ ರೋವರ್, ರೇಂಜರ್ ಪೂರಕ: ಪ್ರೊ.ಜಯರಾಜ್ ಅಮೀನ್
ಪದವಿ ಕಾಲೇಜುಗಳ ಉಪನ್ಯಾಸಕರಿಗೆ ರೋವರ್ - ರೇಂಜರ್ ಮಾಹಿತಿ ಕಾರ್ಯಾಗಾರ

ಮಂಗಳೂರು, ಅ.6: ರೋವರ್, ರೇಂಜರ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ಬದುಕಿನ ಮೌಲ್ಯಗಳೊಂದಿಗೆ ಸಾಹಸ ಚಟುವಟಿಕೆಗಳ ಕಲಿಕೆಗೆ ಪೂರಕವಾಗಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಯರಾಜ್ ಅಮೀನ್ ಅಭಿಪ್ರಾಯಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ, ಕಾಲೇಜು ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ - ಉಡುಪಿ - ಕೊಡಗು ಜಿಲ್ಲಾ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಶುಕ್ರವಾರ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ರೋವರ್ ಮತ್ತು ರೇಂಜರ್ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜಕೀಯರಹಿತ, ಎಲ್ಲರನ್ನು ಒಳಗೊಂಡು ಯಾವುದೇ ಭೇದಭಾವವಿಲ್ಲದೆ ಮಕ್ಕಳಿಗೆ ಸಮಾಜದಲ್ಲಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವುದನ್ನು ಕಲಿಸಿಕೊಡುವ ಸಂಸ್ಥೆ ಇದಾಗಿದೆ. ಪರಿಸರದ ಬಗ್ಗೆ ಕಾಳಜಿ ವಹಿಸುವುದನ್ನೂ ಮಕ್ಕಳಿಗೆ ಇಲ್ಲಿ ಕಲಿಸಲಾಗುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಭಾರತ್ ಸ್ಕೌಟ್ಸ್ ಗೈಡ್ಸ್ ನ ರೋವರ್ ಮತ್ತು ರೇಂಜರ್ ವಿಭಾಗವು ಅವಕಾಶವನ್ನು ಒದಗಿಸುತ್ತದೆ ಎಂದರು.
ರೋವರ್ ಮತ್ತು ರೇಂಜರ್ ನ ಮಂಗಳೂರು ವಿಶ್ವವಿದ್ಯಾನಿಲಯದ ನೋಡಲ್ ಅಧಕಾರಿ ಡಾ.ಸಿದ್ದರಾಜ್, ರಾಜ್ಯ ಸಂಘಟನಾ ಆಯುಕ್ತ ಎಂ ಪ್ರಭಾಕರ್ ಭಟ್, ಜಿಲ್ಲಾ ಉಪಾಧ್ಯಕ್ಷೆ ವಿಮಲಾ ರಂಗಯ್ಯ, ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ಉಡುಪಿಯ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಆನಂದ ಅಡಿಗ, ಉಪನ್ಯಾಸಕಿ ಲತಾ ಬಿ. ಬೆಂಗಳೂರು, ತರಬೇತುದಾರರಾದ ಗುರುಮೂರ್ತಿ ನಾಯ್ಕಾಪು, ಶುಭ ವಿಶ್ವನಾಥ್, ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಜಿಲ್ಲಾ ಸಂಘಟಕಿ ದಮಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ 57, ಉಡುಪಿ ಜಿಲ್ಲೆಯಿಂದ 28 ಹಾಗೂ ಕೊಡಗು ಜಿಲ್ಲೆಯಿಂದ ಇಬ್ಬರು ಸೇರಿದಂತೆ ಒಟ್ಟು 87 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಗೈಡ್ ಆಯುಕ್ತೆ (ಪ್ರಭಾರ) ಜಯವಂತಿ ಸೋನ್ಸ್ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಎಂ.ತುಂಬೆ ಸ್ವಾಗತಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ವಂದಿಸಿದರು.







