ಕುಂಪಲದಲ್ಲಿ ಕೆರೆ-ಪಾರ್ಕ್ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮಂಜೂರು : ಸದಾಶಿವ ಉಳ್ಳಾಲ್

ಉಳ್ಳಾಲ : ಮಂಗಳೂರು ವಿದಾನಸಭಾ ಕ್ಷೇತ್ರದಲ್ಲಿ ಮೂಡದಿಂದಲೂ ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದು ಸ್ಪೀಕರ್ ಖಾದರ್ ಆದೇಶಿಸಿದ್ದು, ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಂಬಿಕಾರೋಡ್ ಮೂರನೇ ಅಡ್ಡ ರಸ್ತೆ, ಅಂಬಿಕಾ ನಗರ ಬಡಾವಣೆಯ ರಾಜಕಾಲುವೆಗೆ ಶಾಸಕ ಯು.ಟಿ ಖಾದರ್ ಅವರ ವಿಶೇಷ ಅನುದಾನದಿಂದ ನಿರ್ಮಾಣಗೊಳ್ಳಲಿರುವ ಕಿರು ಸೇತುವೆ ಕಾಮಗಾರಿಗೆ ಭಾನುವಾರದಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಖಾದರ್ ಅವರ ಆದೇಶದಂತೆ ಈಗಾಗಲೇ ಕುಂಪಲ ಮೂರು ಕಟ್ಟೆಯ ಬೃಹತ್ ಕೆರೆಯ ಪುನರುತ್ಥಾನ ಮತ್ತು ಪಾರ್ಕ್ ನಿರ್ಮಾಣಕ್ಕೆ ಮೂಡದಿಂದ ಐದು ಕೋಟಿ ರೂ. ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಸ್ಪೀಕರ್ ಖಾದರ್ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಎಲ್ಲರ ಸಹಕಾರ ಅಗತ್ಯ. ಕಾಮಗಾರಿಯ ಗುಣ ಮಟ್ಟತೆಯನ್ನು ಸ್ಥಳೀಯರೇ ಪರಿಶೀಲಿಸಬೇಕು ಎಂದರು.
ಸೋಮೇಶ್ವರ ಪುರಸಭಾ ಅಧ್ಯಕ್ಷ ಕಮಲ, ಉಪಾಧ್ಯಕ್ಷ ರವಿಶಂಕರ ಸೋಮೇಶ್ವರ, ವಿಪಕ್ಷ ನಾಯಕರಾದ ಪುರುಷೋತ್ತಮ ಶೆಟ್ಟಿ ಪಿಲಾರು, ಸದಸ್ಯರಾದ ಪರ್ವಿನ್ ಸಾಜಿದ್, ದೀಪಕ್ ಪಿಲಾರು, ನಾಮ ನಿರ್ದೇಶಿತ ಸದಸ್ಯರಾದ ಶ್ರೀಧರ್ ಆಳ್ವ, ಸ್ಥಳೀಯರಾದ ರೋಷನ್ ಅಂಬಿಕಾರೋಡ್, ಅರುಣ್ ಕುಟಿನ್ಹಾ, ಜೆಎಮ್ ರಾಜೇಶ್ ಮಡಿವಾಳ, ಗುತ್ತಿಗೆದಾರರಾದ ಮಹಮ್ಮದ್ ಇಜಾಝ್ ಮತ್ತಿತರರು ಉಪಸ್ಥಿತರಿದ್ದರು.







