ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ರೂಪಾ ಬಲ್ಲಾಳ್ ಆಯ್ಕೆ

ಮಂಗಳೂರು: ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಇದರ 2024ನೆ ಸಾಲಿನ ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಮಾಜ ಸೇವಕಿ, ಅಲೆಮಾರಿ ಮತ್ತು ವಲಸೆ ಕಾರ್ಮಿಕರ ಮಕ್ಕಳ ತಾಯಿ ಎಂದೇ ಗುರುತಿಸಿಕೊಂಡಿರುವ ರೂಪಾ ಬಲ್ಲಾಳ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಡುಪಿ ಮೂಲದ ರೂಪಾ ಬಳ್ಳಾಲ್ ಬಡವರು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗಾಗಿ ತನ್ನ ಮನೆಯಲ್ಲಿ ವಿದ್ಯಾ ದೇಗುಲವನ್ನು ತೆರೆದು ಅವರ ಜೀವನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಮುಂದುವರಿಯಲು ಅವಕಾಶ ನಿರ್ಮಾಣ ಮಾಡಿ ಕೊಟ್ಟವರು. ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ದಾವಣಗೆರೆ, ಕೊಪ್ಪಳ ಮುಂತಾದ ಉತ್ತರ ಕರ್ನಾಟಕದಿಂದ ಕೂಲಿ ಕಾರ್ಮಿಕರಾಗಿ ವಲಸೆ ಬಂದು ಕೊಳಗೇರಿಯಲ್ಲಿ ಬದುಕುವ 500ಕ್ಕೂ ಅಧಿಕ ಮಕ್ಕಳಿಗೆ ಸುಮಾರು ಹದಿನೈದು ವರ್ಷಗಳಿಂದ ತನ್ನ ಮನೆಯಲ್ಲಿ ಉಚಿತ ಶಿಕ್ಷಣ ನೀಡಿದ್ದಾರೆ. ಈ ಪೈಕಿ ಹಲವು ಮಕ್ಕಳು ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆದು ಸ್ವಾಭಿಮಾನಿಗಳಾಗಿ ಉದ್ಯೋಗ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ.
ಇಂಗ್ಲಿಷ್, ಕನ್ನಡ, ಗಣಿತ, ವಿಜ್ಞಾನ ಪಾಠದ ಜೊತೆಗೆ ಆಟ, ಸಂಗೀತ, ನೃತ್ಯ, ಭರತನಾಟ್ಯ, ಚಿತ್ರಕಲೆ, ಯೋಗವನ್ನು ಕಲಿಸುತ್ತಾರೆ. ಹಲವು ಬಾರಿ ರಕ್ತದಾನ ಮಾಡಿದ ಹಿರಿಮೆಗೂ ರೂಪಾ ಬಲ್ಲಾಳ್ ಪಾತ್ರರಾಗಿದ್ದಾರೆ.
ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಧ್ಯಕ್ಷ ಎನ್. ನಾಗರಾಜ್ ಬಳ್ಳಾಲ್‌ರ ಪತ್ನಿಯಾಗಿರುವ ಇವರು ಮಣಿಪಾಲ ವಿವಿಯಿಂದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ 2024 ನೇ ಸಾಲಿನ ಬಿಎಸ್‌ಡಬ್ಲ್ಯುಟಿ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಸನ್ಮಾನ ಪತ್ರ, ಫಲಕ ಒಳಗೊಂಡಿರುತ್ತದೆ. ಡಿ.25ರಂದು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.







