ವಾಸುದೇವ ಉಚ್ಚಿಲರಿಗೆ ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನ

ಮಂಗಳೂರು , ಆ.17: ಹಸಿದವರಿಗೆ ಅನ್ನ, ಶಿಕ್ಷಣಕ್ಕಾಗಿ ಒತ್ತು ನೀಡಿ ಜಾತಿ ಧರ್ಮ ಮೀರಿ ಎಲ್ಲರ ಹಿತಕ್ಕಾಗಿ ಶ್ರಮಿಸಿದವರು ಉಮ್ಮಕ್ಕೆ ಎಂದು ಮಂಗಳೂರು ವಿವಿ ಉಪಕುಲಪತಿ ಡಾ. ಪಿ.ಎಲ್.ಧರ್ಮ ಅಭಿಪ್ರಾಯಪಟ್ಟಿದ್ದಾರೆ.
ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರವಿವಾರ ನಡೆದ ಉಮ್ಮಕ್ಕೆ ( ಬೋಳಾರದ ದಿ.ಉಮಾವತಿ ಅಕ್ಕ ) ನೆನಪು ಕಾರ್ಯಕ್ರಮದಲ್ಲಿ ಸಾಹಿತ್ಯಕ ಸಂಘಟಕ ಮತ್ತು ಜನಪರ ಹೋರಾಟಗಾರ ವಾಸುದೇವ ಉಚ್ಚಿಲರಿಗೆ ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನಗೈದು ಮಾತನಾಡಿದರು.
ಉಮ್ಮಕ್ಕ ತನ್ನ ಹಿತದ ಬಗ್ಗೆ ಯೋಚಿಸದೆ ಇನ್ನೊಬ್ಬರ ಹಿತಕ್ಕಾಗಿ ಶ್ರಮಿಸಿದವರು. ಇಂತಹ ಹಿರಿಯರ ಬಗ್ಗೆ ನಾವು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಕೆ. ರಾಜು ಮೊಗವೀರ ಶುಭ ಹಾರೈಸಿ ಮಾತನಾಡಿ ಉಮ್ಮಕ್ಕೆ ಅವರ ಚಿಂತನೆ ಇತರರಿಗೆ ಸಹಾಯ ಮಾಡುವ ಮತ್ತು ಇತರರಿಗೆ ಸಹಾಯ ಮಾಡುವುದಾಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಳ್ಪ್ಪಾಡಿ ಸಂಸ್ಮರಣಾ ಭಾಷಣ ಮಾಡಿ ಉಮ್ಮಕ್ಕೆ ನೆರೆಕರೆಯವರಿಗೆ ನೆರೆಹೊರೆಯಾಗಿರಲಿಲ್ಲ. ನೆರೆಕೆರೆ ,ನಾಡು , ಊರು ಮನೆ ಸಮಾಜವನ್ನು ಪ್ರೀತಿಸಿದವರು ವಾಸ್ತವ್ಯದ ಸಮಾಜದೊಂದಿಗೆ ಬದುಕಿದವರು ಎಂದರು.
ಮತ್ತು ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಯಾರು ವಿಶೇಷ ದತ್ತಿ ಉಪನ್ಯಾಸ ನೀಡಿದರು.
ಎಸ್‌ಎಸ್‌ಎಲ್‌ಸಿ. ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಮಾಧ್ಯಮದಲ್ಲಿ ಪ್ರೌಢ ಶಾಲಾ ಮಟ್ಟದಲ್ಲಿ ಅಧಿಕ ಅಂಕಗಳಿಸಿದ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಫಾತಿಮಾತ್ ರಿಫಾನ, ಮಾಣಿಲ ಸರಕಾರಿ ಪ್ರೌಢಶಾಲೆಯ ಶೈನಾ ಲೀಸಾ ಮೊಂತೇರೊ ಮತ್ತು ಮಂಗಳೂರಿನ ಜಪ್ಪು ಕಾಸ್ಸಿಯ ಪ್ರೌಢಶಾಲೆಯ ಪ್ರಜ್ಞಾ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉಮ್ಮಕ್ಕೆ ಎಲ್ಲರಿಗೂ ಆದರ್ಶ, ಉಮ್ಮಕ್ಕೆ ನೆನಪು ಶಾಶ್ವತವಾಗಿ ಉಳಿಯಲಿ ಎಂದು ಹಾರೈಸಿದರು.
ಪದರಂಗಿತ ಭಾವಗೀತಾ ಕಾರ್ಯಕ್ರಮವನ್ನು ಕಿನ್ನಿಗೋಳಿ ಸ್ವರಾಂಜಲಿಯ ಆಶ್ವೀಜಾ ಉಡುಪ ನಡೆಸಿಕೊಟ್ಟರು.
ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಪ್ರೊ. ಕೃಷ್ಣಮೂರ್ತಿ ಸ್ವಾಗತಿಸಿದರು. ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಾವಳಿ ಲೇಖಕಿ ವಾಚಕಿಯರ ಸಂಘದ ಕಾರ್ಯದರ್ಶಿ ಯಶೋಧ ಮೋಹನ್ ವಂದಿಸಿದರು. ಸುನೀಲ್ ಕಾರ್ಯಕ್ರಮ ನಿರೂಪಿಸಿದರು.







