ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 25 ಸಾವಿರಕ್ಕೂ ಹೆಚ್ಚು ಮಹಿಳಾ ಭಕ್ತರಿಗೆ ಸೀರೆ ವಿತರಣೆ

ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಲಲಿತಾ ಪಂಚಮಿಯ ದಿನ ಭಕ್ತ ಮಹಿಳೆಯರಿಗೆ ಶೇಷವಸ್ತ್ರವಾಗಿ ಸುಮಾರು 25 ಸಾವಿರಕ್ಕೂ ಹೆಚ್ಚು ಸೀರೆಗಳು ವಿತರಿಸಲಾಯಿತು.
ಸಂಜೆ ಮೂರರಿಂದಲೇ ಭಕ್ತರು ಸರದಿಯಲ್ಲಿ ನಿಂತಿದ್ದು, ಸಂಜೆ 5 ಗಂಟೆಯಿಂದ ಆರಂಭವಾದ ವಿತರಣೆ ತಡರಾತ್ರಿ ವರೆಗೆ ನಡೆಯಿತು. ಈ ವರ್ಷದಲ್ಲಿ ಒಟ್ಟಾರೆ ಸುಮಾರು 44 ಸಾವಿರ ಸೀರೆಗಳನ್ನು ವಿತರಿಸಲು ದೇವಳವು ಪೂರ್ವಸಿದ್ಧತೆ ಮಾಡಿಕೊಂಡಿತ್ತು.
ಭಕ್ತರ ಸಾಲಿನಲ್ಲಿ ನೂಕುನುಗ್ಗಲು ತಪ್ಪಿಸಲು ದೇವಾಲಯದ ಮುಂಭಾಗದಲ್ಲಿ ವಿಶೇಷ ಅಟ್ಟಳಿಗೆ ಅಳವಡಿಸಲಾಗಿತ್ತು. ವಿತರಣೆ ಸಂದರ್ಭದಲ್ಲಿ ಭಕ್ತರು ನೇರವಾಗಿ ಅನ್ನದಾನದ ಛತ್ರಕ್ಕೆ ತೆರಳಿ ಶೇಷವಸ್ತ್ರದ ಜೊತೆಗೆ ಅನ್ನದಾನದ ಪ್ರಸಾದವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ದೇವಳದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಕೊಡೆತ್ತೂರುಗುತ್ತಿನ ಪ್ರಮುಖರು ಹಾಗೂ ವಿವಿಧ ಸೇವಾದಾನಿಗಳು ಉಪಸ್ಥಿತರಿದ್ದರು.





