ಸೌಜನ್ಯ ಹತ್ಯೆ ಪ್ರಕರಣ: ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚನೆ

ಪುತ್ತೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೈಜ್ಯ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲು ಹೋರಾಟ ರೂಪಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಹೋರಾಟ ಸಮಿತಿ ರಚಿಸಲಾಗಿದೆ.
ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಮಂಗಳೂರು, ಸುಳ್ಯ, ಬೆಳ್ತಂಗಡಿ, ಕಡಬ , ಬಂಟ್ವಾಳ, ವಿಟ್ಲ, ಪುತ್ತೂರು ತಾಲೂಕಿನ ಒಕ್ಕಲಿಗ ಗೌಡ ಸಮಾಜದ ಮುಖಂಡರ ಸಭೆಯಲ್ಲಿ ಹೋರಾಟ ಸಮಿತಿ ರಚಿಸಲಾಗಿದೆ.
ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾದ ಆರೋಪಿಯನ್ನು ನಿರಪರಾಧಿಯೆಂದು ನ್ಯಾಯಾಲಯವು ಘೋಷಿಸಿದೆ. ನೈಜ ಆಪರಾಧಿಗಳು ಯಾರೆಂದು ಈ ತನಕ ಗೊತ್ತಾಗಿಲ್ಲ. ಇದರಿಂದಾಗಿ ಈ ಪ್ರಕರಣ ವನ್ನು ಮರು ತನಿಖೆ ನಡೆಸಿ ನೈಜ ಅಪರಾಧಿಯನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡುವಂತೆ ವಿವಿಧ ರೀತಿಯ ಹೋರಾಟದ ಮೂಲಕ ಸರಕಾರವನ್ನು ಒತ್ತಾಯಿಸಲು ಹಾಗೂ ವಕೀಲರಗಳ ಪ್ರತ್ಯೇಕ ಸಮಿತಿ ರಚಿಸಿ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಮತ್ತು ಅವರ ಸಂಬಂಧಿಕಾದ ವಿಠಲ ಮತ್ತು ಜಗದೀಶ್ ಅವರು ಭಾಗವಹಿಸಿ ಸೌಜನ್ಯ ಕೊಲೆ ನಡೆದ ಮತ್ತು ಅದರ ಬಳಿಕ ನಡೆದ ತನಿಖೆ, ಬೆದರಿಕೆಗಳ ಕುರಿತು ಮಾಹಿತಿ ನೀಡಿದರು ಹಾಗೂ ತಮಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡರು.
ಹೋರಾಟ ಸಮಿತಿ ಸಂಚಾಲಕರಾಗಿ ಮಂಗಳೂರು ಒಕ್ಕಲಿಗ ಗೌಡ ಸಂಘದ ಪ್ರಧಾನ ಕಾಯದರ್ಶಿಯಾದ ಡಿ.ಬಿ. ಬಾಲ ಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ರಕ್ಷಿತ್, ಜಿಲ್ಲೆಯ ಎಲ್ಲಾ ತಾಲೂಕಿನ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಸಂಘ, ಮಹಿಳಾ ಸಂಘದ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಬೆಳ್ತಂಗಡಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಮಂಗಳೂರು ಸಂಘದ ಅಧ್ಯಕ್ಷ ಗುರುದೇವ್, ಕಡಬದ ಅಧ್ಯಕ್ಷ ಸುರೇಶ್, ಸುಳ್ಯದ ಅಧ್ಯಕ್ಷ ಚಂದ್ರ ಕೋಲ್ಚಾರ್, ಪುತ್ತೂರು ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.







