ಜಿಬಿಎ ಚುನಾವಣೆಯಲ್ಲಿ ಎಸ್‌ಡಿಪಿಐ ನಿರ್ಣಾಯಕ ಪಾತ್ರ: ಅಬ್ದುಲ್ ಮಜೀದ್

ಮಂಗಳೂರು: ಮುಂಬರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಲ್ಲಿ ಎಸ್‌ಡಿಪಿಐ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ.
ನಗರದ ಎಕ್ಕೂರಿನ ಇಂಡಿಯಾನ ಸಭಾಂಗಣದಲ್ಲಿ ಮಂಗಳವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಹುತೇಕ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆಗೆ ತಯಾರಿ ನಡೆಸುತ್ತಿದೆ. ಮುಖ್ಯವಾಹಿನಿಯಲ್ಲಿರುವ ಎಲ್ಲ ಪಕ್ಷಗಳಿಗೂ ಸರಿಯಾದ ಸ್ಪರ್ಧೆ ನೀಡಲಿದೆ. ಸ್ಥಳೀಯವಾಗಿ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು ಜನರ ಬಳಿಗೆ ಎಸ್‌ಡಿಪಿಐ ತೆರಳಲಿದೆ ಎಂದರು.
ಎಸ್‌ಐಆರ್ ಮಾಪಿಂಗ್ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಷ್ಟ್ರೀಯ ಪ್ರತಿನಿಧಿ ಸಭೆಯಲ್ಲಿ ಮುಖ್ಯವಾಗಿ ಎಸ್‌ಐಆರ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.
ದೇಶದಲ್ಲಿ ಎಸ್‌ಐಆರ್‌ನಿಂದ ಮುಸ್ಲಿಂರಿಗೆ ಮಾತ್ರ ತೊಂದರೆಯಾಗುತ್ತದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಎಸ್‌ಐಆರ್‌ನಿಂದ ಬಡವರು, ವಲಸೆ ಕಾರ್ಮಿಕರು, ಮಹಿಳೆಯರಿಗೆ ತೊಂದರೆಯಾಗಲಿದೆ ಎಂದು ನುಡಿದರು.
ಬಾಂಗ್ಲಾ ದೇಶದವರು ಬಂದು ಭಾರತದಲ್ಲಿ ತಳವೂರಿದ್ದರೆ ಅದಕ್ಕೆ ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದರು.
*14 ರಾಜ್ಯಗಳ ನಾಯಕರು : ಎರಡು ದಿನಗಳ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯಲ್ಲಿ ದೇಶದ 14 ರಾಜ್ಯಗಳ ಎಸ್‌ಡಿಪಿಐ ನಾಯಕರು ಭಾಗವಹಿಸಿದ್ದಾರೆ. ಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪಕ್ಷದ ಕಾರ್ಯಚಟುವಟಿಕೆಗಳ ವರದಿ ಮಂಡಿಸಲಾಗುತ್ತಿದೆ. ಅದರ ಬಗ್ಗೆ ಚರ್ಚೆ ನಡೆಯಲಿದೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಗಳ ಚರ್ಚೆ ನಡೆಯಲಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ತಿಳಿಸಿದರು.
ಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮತ್ತು ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಮತ್ತು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಯೂ ನಡೆಯಲಿದೆ ಎಂದರು.







