ಜ.27 ರಂದು ಡಿಎಸ್‌ಎಸ್‌ನಿಂದ ವಿಚಾರ ಸಂಕಿರಣ
ಮಂಗಳೂರು, ಜ.24: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ವತಿಯಿಂದ ಭಾರತ ಸಂವಿಧಾನ ಜಾರಿಯಾಗಿ 75ನೆ ವರ್ಷ ಹಾಗೂ ದಲಿತ ಸಂಘರ್ಷ ಸಮಿತಿ ಚಳುವಳಿಗೆ 50 ಸಂಭ್ರಮಾಚರಣೆಯ ಅಂಗವಾಗಿ ಜ. 27ರಂದು ವಿಚಾರ ಸಂಕಿಣವನ್ನು ಆಯೋಜಿಸಲಾಗಿದೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ 11 ಗಂಟೆಗೆ ‘ಭಾರತ ಸಂವಿಧಾನದ ಆಶಯಗಳು ಮತ್ತು ಮನುವಾದಿಗಳ ಷಡ್ಯಂತ್ರಗಳು ಹಾಗೂ ‘ದಲಿತ ಸಂಘರ್ಷ ಸಮಿತಿಯ ಹುಟ್ಟು, ಹೋರಾಟ, ನಮ್ಮ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಸಮಿತಿಯ ದ.ಕ. ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳ ಕುರಿತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಅಂಕಣಕಾರ ಶಿವಸುಂದರ್ ಹಾಗೂ ದಲಿತ ಚಳವಳಿಯ ಕುರಿತು ಕರ್ನಾಟಕ ಕೇಂದ್ರೀಯ ವಿವಿ ಕಲಬುರ್ಗಿಯ ಪ್ರಾಧ್ಯಾಪಕ ಅಪ್ಪೆಗೆರೆ ಸೋಮಶೇಖರ್ ವಿಚಾರ ಮಂಡಿಸಲಿದ್ದಾರೆ. ಕಾರ್ಯಕ್ರಮವನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು ಎಂದು ಅವರು ವಿವರಿಸಿದರು.
ದೇಶಕ್ಕೆ ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ನಮ್ಮನ್ನಾಳುವ ಸರಕಾರಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸಂವಿಧಾನದ ಮೂಲ ಆಶಯಗಳು ಇಂದಿಗೂ ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್‌ರವರ ವಿಚಾರಧಾರೆಗಳಿಂದ ಸ್ಪೂರ್ತಿ ಪಡೆದು ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುವ ಉದ್ದೇಶಗಳೊಂದಿಗೆ ಸಾಮಾಜಿಕ ಪರಿವರ್ತನೆಯ ಪ್ರೊ.ಬಿ. ಕೃಷ್ಣಪ್ಪರವರು ದಲಿತ ಸಂಘರ್ಷ ಸಮಿತಿ ಆರಂಭಿಸಿದ್ದರು. ಸಂಘಟನೆಯು ರಾಜ್ಯಾದ್ಯಂತ ದಲಿತ ಮೇಲಿನ ದೌರ್ಜನ್ಯ, ಅಸಮಾನತೆಯ ವಿರುದ್ಧ ಹೋರಾಟ, ಭೂ ಹೋರಾಟ, ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಸಂಘಟಿಸುವ ಜತೆಗೆ, ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸುವ ಪ್ರಯತ್ನ ನಡೆಸುತ್ತಾ ಬಂದಿದೆ ಎಂದು ಜಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಕೋಶಾಧಿಕಾರಿ ನಾಗೇಶ್ ಚಿಲಿಂಬಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಾನಂದ ಡಿ., ಕಮಲಾಕ್ಷ ಬಜಾಲ್, ರಾಮದಾಸ್ ಮೇರೆಮಜಲು, ರಾಘವೇಂದ್ರ ಎಸ್., ರುಕ್ಕಯ್ಯ ಅಮೀನ್ ಕರಂಬಾರು, ರಾಜಯ್ಯ ಟಿ.ಡಿ. ಮೊದಲಾದವರು ಉಪಸ್ಥಿತರಿದ್ದರು.