ಮಲ್ಲಿಕಟ್ಟೆಯಲ್ಲಿ ಸರಣಿ ಅಪಘಾತ

ಮಂಗಳೂರು. ಆ.3: ನಗರದ ಕದ್ರಿ ಮಲ್ಲಿಕಟ್ಟೆಯ ಬಳಿ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ಟೆಂಪೋ, ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಮತ್ತು ಕಾರಿಗೆ ಢಿಕ್ಕಿಯಾದ ಘಟನೆ ಗುರುವಾರ ಪೂರ್ವಾಹ್ನ 11ಕ್ಕೆ ನಡೆದಿದ್ದು, ಈ ಘಟನೆಯಲ್ಲಿ ಪಾದಚಾರಿ ಬಾಲಕಿಯೊಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಲ್ಲಿಕಟ್ಟೆಯ ಆಭರಣ ಜ್ಯುಲೆಲ್ಲರ್ಸ್ ಬಳಿಯ ಜಂಕ್ಷನ್‌ನಿಂದ ಮಲ್ಲಿಕಟ್ಟೆ ಕಡೆಗೆ ಸಾಗುವ ಇಳಿಜಾರು ರಸ್ತೆಯಲ್ಲಿ ವ್ಯಾಗನಾರ್ ಕಾರನ್ನು ಚಾಲಕ ಪೌಲ್ ಜೋಸೆಫ್ ರಸ್ಕಿನ್ಹಾ ಎಂಬಾತ ನಿರ್ಲಕ್ಷ್ಯದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ಮುಂಭಾಗದಲ್ಲಿ ಚಲಿಸುತ್ತಿದ್ದ ಟೆಂಪೋಕ್ಕೆ ಢಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲೇ ನಿಲ್ಲಿಸಲಾಗಿದ್ದ ಎರಡು ಬೈಕ್ ಮತ್ತು ಓಮ್ನಿ ಕಾರಿಗೆ ಢಿಕ್ಕಿಯಾಗಿದೆ.
ಈ ವೇಳೆ ರಸ್ತೆಯಲ್ಲಿ ನಡೆದಕೊಂಡು ಹೋಗುತ್ತಿದ್ದ ಕಮಲಾಕ್ಷಿ (16) ಎಂಬ ಬಾಲಕಿಗೆ ಕಾರು ಢಿಕ್ಕಿಯಾಗಿದೆ. ಅಲ್ಲದೆ ಮಲ್ಲಿಕಟ್ಟೆ ಕಡೆಗೆ ಸಾಗುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿಯಾಗಿ ನಿಂತಿದೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಕಾರು ಚಾಲಕನ ವಿರುದ್ಧ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





