ಮಂಗಳೂರು| ಎರಡು ವರ್ಷದಿಂದ ಪತಿಯಿಂದಲೇ ಲೈಂಗಿಕ ವಿಕೃತಿ: ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಹೇಳಿಕೆ

ಮಂಗಳೂರು: ಸತತ ಎರಡು ವರ್ಷದಿಂದ ಪತಿಯು ಇತರ ಪುರುಷರ ಜೊತೆ ಲೈಂಗಿಕ ಸಂಪರ್ಕ ಬೆಳೆಸು ವಂತೆ ಮಾಡಿ ವಿಕೃತಿ ಮೆರೆದಿದ್ದಲ್ಲದೆ, ನನ್ನ ತಾಯಿಯನ್ನೂ ಕೂಡ ಒತ್ತಾಯಿಸಿರುವುದಾಗಿ ಪತಿಯಿಂದ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯು ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಚಂದ್ರನಾಯ್ಕ್ ಹಾಗೂ ಆತನಿಗೆ ಸಹಕರಿಸಿದ ಆರೋಪದಲ್ಲಿ ಸಂತ್ರಸ್ತೆಯ ಪತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
2010ರ ನವೆಂಬರ್ 10ರಂದು ಆರೋಪಿ ಗಿರೀಶ್ ಯಾನೆ ರವಿಯ ಜೊತೆ ನನಗೆ ಪ್ರೇಮ ವಿವಾಹವಾಗಿತ್ತು. 2023ರ ಜುಲೈಯಲ್ಲಿ ತನಗೆ ಒಬ್ಬನಿಂದ ದೈಹಿಕ ಸಂರ್ಪಕ ಮಾಡಲು ಆಗುತ್ತಿಲ್ಲ. ಇನ್ನೊಬ್ಬ ಇದ್ದರೆ ದೈಹಿಕ ಸಂಪರ್ಕದಲ್ಲಿ ಇಂಟರೆಸ್ಟ್ ಬರುತ್ತದೆ ಮತ್ತು ತನ್ನ ಪ್ರಾಬ್ಲಂ ಕೂಡ ಸರಿ ಹೋಗುತ್ತದೆ. ಹಾಗಾಗಿ ಬೇರೆಯವರ ಜೊತೆ ನೀನು ದೈಹಿಕ ಸಂಪರ್ಕ ಮಾಡಬೇಕು ಎಂದು ಪತಿ ಗಿರೀಶ್ ಹೇಳಿದ. ಈ ವೇಳೆ ನಾನು ಒಪ್ಪದಿದ್ದಾಗ ಮಕ್ಕಳನ್ನು ಸಾಯಿಸುತ್ತೇನೆ ಎಂದು ಹೆದರಿಸಿ ಒಬ್ಬನನ್ನು ಮನೆಗೆ ಕರೆದುಕೊಂಡು ಬಂದು ಆತನ ಜೊತೆ ದೈಹಿಕ ಸಂಪರ್ಕ ಮಾಡಬೇಕೆಂದು ಒತ್ತಾಯಿಸಿದ. ಹೆದರಿದ ನಾನು ದೈಹಿಕ ಸಂಪರ್ಕ ಮಾಡಿದಾಗ ಆರೋಪಿ ಪತಿ ಗಿರೀಶ್ ಯಾನೆ ರವಿ ಆತನ ಫೋನ್‌ನಲ್ಲಿ ರೆಕಾರ್ಡ್ ಮಾಡಿ ನಂತರ ಬೇರೆಯವರ ಜೊತೆ ಕೂಡಾ ದೈಹಿಕ ಸಂಪರ್ಕ ಮಾಡಬೇಕು. ಇಲ್ಲದಿದ್ದಲ್ಲಿ ಈ ವೀಡಿಯೊವನ್ನು ವೈರಲ್ ಮಾಡುತ್ತೇನೆ. ಮಕ್ಕಳನ್ನು ಕೊಲೆ ಮಾಡುತ್ತೇನೆ ಎಂದು ಹೆದರಿಸಿದ. ಹಾಗಾಗಿ ಆತ ಕರೆದುಕೊಂಡು ಬಂದವರ ಜೊತೆ ನಾನು ದೈಹಿಕ ಸಂಪರ್ಕ ಮಾಡಿದ್ದು, ಆರೋಪಿಯು ಅವರಿಂದ ಹಣ ಪಡೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಪತಿ ಗಿರೀಶ್ ಯಾನೆ ರವಿ ನನ್ನ ತಾಯಿಗೂ ಆಸೆ ತೋರಿಸಿ ದೈಹಿಕ ಸಂಪರ್ಕ ಮಾಡಲು ಒತ್ತಾಯಿಸಿದ್ದಾನೆ. ತಾಯಿ ನಿರಾಕರಿಸಿದಾಗ, ಆಕೆಗೂ ಬೆದರಿಕೆ ಹಾಕಿದ್ದ. ಅಲ್ಲದೆ ನನ್ನ ತಾಯಿ ಬಾತ್‌ರೂಮ್‌ಗೆ ಹೋಗುವ ಸಮಯ ಹಾಗೂ ಬಟ್ಟೆ ಬದಲಾಯಿಸುವಾಗ ವಿಡಿಯೊ ಹಾಗೂ ಫೋಟೊಗಳನ್ನು ತೆಗೆದಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.
2025ರ ಜ.5ರಂದು ಗಿರೀಶ್ ಯಾನೆ ರವಿ ತನಗೆ ಕ್ಯಾನ್ಸರ್ ಇದೆ. 2 ವರ್ಷದಲ್ಲಿ ನಾನು ಸಾಯುತ್ತೇನೆ. ಅದಕ್ಕೆ ನೀನು ತನ್ನ ಪಾರ್ಟ್ನರ್ ಆಶ್ವಿಜ್ ಜೊತೆ ಗಂಡ-ಹೆಂಡತಿಯ ರೀತಿ ಒಟ್ಟಿಗೆ ಇರಬೇಕು. ಅವನು ನಿನಗೆ ಒಳ್ಳೆಯ ಲೈಫ್ ಕೊಡುತ್ತಾನೆ ಮತ್ತು ಮಕ್ಕಳನ್ನು ಅವನ ಮಕ್ಕಳ ರೀತಿಯಲ್ಲಿ ನೋಡಿಕೊಳ್ಳುವು ದಾಗಿ ತಿಳಿಸಿದ. ಅದರಂತೆ ನಾನು ಅಶ್ವಿಜ್ ಜೊತೆ ಮಾತನಾಡಿದಾಗ ಆತನು ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿದ. ಅದರಂತೆ ಇಬ್ಬರೂ ಒಪ್ಪಿ ಫೆ.5ರಂದು ದೈಹಿಕವಾಗಿ ಒಂದಾದಾಗ ಆರೋಪಿಯು ಅದನ್ನು ವಿಡಿಯೋ ಮಾಡಿ ಬೇರೆಯವರ ಜೊತೆಯೂ ದೈಹಿಕ ಸಂಪರ್ಕ ನಡೆಸಬೇಕು. ಇಲ್ಲದಿದ್ದಲ್ಲಿ ಅದನ್ನು ವೈರಲ್ ಮಾಡುವುದಾಗಿ ಹೇಳಿದ. ನೀನು ಒಪ್ಪದೆ ಇದ್ದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
2024ರ ಅಕ್ಟೋಬರ್‌ನಲ್ಲಿ ನನಗೆ ಕಾವೂರು ಪೊಲೀಸ್ ಠಾಣೆಯ ಚಂದ್ರನಾಯ್ಕ್‌ನ ಪರಿಚಯವಾಗಿದೆ. ಆತ ಕೂಡ ಮನೆಗೆ ಬಂದಿದ್ದು, ಒತ್ತಾಯ ಪೂರ್ವಕವಾಗಿ ಆರೋಪಿಗಳಿಬ್ಬರು ತನ್ನ ಜೊತೆ ದೈಹಿಕ ಸಂಪರ್ಕ ನಡೆಸಿದ್ದಾರೆ. 2025ರ ಜು.12ರಂದು ರಾತ್ರಿ ಆರೋಪಿ ಗಿರೀಶ್ ಯಾನೆ ರವಿ ತನ್ನ ಜೊತೆ ಗಲಾಟೆ ಮಾಡಿದಾಗ ನಾನು ಸಹಾಯಕ್ಕಾಗಿ ಚಂದ್ರನಾಯ್ಕ್‌ಗೆ ಫೋನ್ ಮಾಡಿದೆ. ಆತ ಜು.13ರಂದು ಮುಂಜಾವ 2:30ಕ್ಕೆ ಮನೆಗೆ ಬಂದು ವಿಚಾರಿಸಿದ. ಬಳಿಕ ನನ್ನ ಮನೆಯವರ ಬಳಿ ನೀವು ಹೋಗಿ. ನಾನು ಸರಿ ಮಾಡುತ್ತೇನೆ ಎಂದು ಹೇಳಿದ. ನನ್ನ ಮನೆಯವರು ಮನೆಯ ಹೊರಗೆ ಹೋದಾಗ ಚಂದ್ರನಾಯ್ಕ್‌ನು ಗಿರೀಶ್‌ನ ಕೈಯಿಂದಲೇ ಒಂದು ವಿಡಿಯೊ ಡಿಲೀಟ್ ಮಾಡಿಸಿದ. ನಂತರ ಚಂದ್ರನಾಯ್ಕ್ ದೈಹಿಕ ಸಂಪರ್ಕ ನಡೆಸಲು ಕೇಳಿದಾಗ, ನಾನು ಒಪ್ಪಲಿಲ್ಲ. ಆವಾಗ ಪತಿ ಗಿರೀಶ್ ಯಾನೆ ರವಿಯು ಚಂದ್ರನಾಯ್ಕನ ಜೊತೆ ದೈಹಿಕ ಸಂಪರ್ಕ ನಡೆಸಲು ಒತ್ತಾಯಿಸಿದ. ನಾನು ನಿರಾಕರಿಸಿದರೂ ಆರೋಪಿಗಳಿಬ್ಬರು ಬಲವಂತವಾಗಿ ನನ್ನ ಜೊತೆ ದೈಹಿಕ ಸಂಪರ್ಕ ನಡೆಸಿರುತ್ತಾರೆ ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿದ ಕಂಕನಾಡಿ ನಗರ ಠಾಣೆಯ ಪೊಲೀಸರು ಆರೋಪಿಗಳಾದ ಕಾವೂರು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಬಾಗಲಕೋಟೆ ಜಿಲ್ಲೆಯ ಚಂದ್ರನಾಯ್ಕ್ ಮತ್ತು ಸಂತ್ರಸ್ತೆಯ ಪತಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.







