ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ: ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

ಮಂಗಳೂರು: ಭಾರತದಲ್ಲಿ ಹಡಗು ನಿರ್ಮಾಣಗಳ ಕ್ಲಸ್ಟರ್ ಗಳನ್ನು ನಿರ್ಮಿಸುವ ಮೂಲಕ ಹಡಗು ನಿರ್ಮಾಣದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಬಂದರು ನೌಕಯಾನ ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ್ ತಿಳಿಸಿದ್ದಾರೆ.
ಎನ್‌ಎಂಪಿಎ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ನಗರಕ್ಕೆ ಆಗಮಿಸಿದ ಸಚಿವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಚೀನಾ, ಕೊರಿಯಾ, ಜಪಾನ್‌ನಂತಹ ದೇಶಗಳು ಹಡಗು ತಯಾರಿಕೆಯಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಾಗಿವೆ. ಮುಂದಿನ ದಿನಗಳಲ್ಲಿ ಭಾರತದ ಒಡಿಶಾ, ಗುಜರಾತ್, ತಮಿಳುನಾಡು ಹಡಗು ನಿರ್ಮಾಣದಲ್ಲಿ ಸ್ವಾಯತ್ತತೆ ಸಾಧಿಸಲು ಕ್ಲಸ್ಟರ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಸೋನಾವಾಲ್ ಹೇಳಿದರು.
ನವಮಂಗಳೂರು ಬಂದರನ್ನಾಗಿ ಅಭಿವೃದ್ಧಿಪಡಿಸಿ, ನೌಕಾಯಾನದ ಪ್ರವಾಸೋದ್ಯಮ, ಕೈಗಾರಿಕಾ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಜೊತೆಗೆ ಆರ್ಥಿಕ ಸಂಪನ್ಮೂಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮಂಗಳೂರು ಬಂದರು ಸರಕು ನಿರ್ವಹಣೆಗೆ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಸೋಲಾರ್ ಶಕ್ತಿ, ಇಂಧನ ಕ್ಷಮತೆ ಸೇರಿದಂತೆ ಗ್ರೀನ್ ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ೫೦ ವರ್ಷಗಳಲ್ಲಿ ನವಮಂಗಳೂರು ಬಂದರು ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರ ಜಿಲ್ಲೆಯ ಜನತೆಯ ಸಹಕಾರದಿಂದ ಬೆಳೆದು ದೇಶಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಎನ್‌ಎಂಪಿಎ ಅಧ್ಯಕ್ಷ ಡಾ.ಅಕ್ಕರಾಜು ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.







