ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ ರಜತ ವರ್ಷಾಚರಣೆಗೆ ಚಾಲನೆ

ಮಂಗಳೂರು, ಜ.6: ಮಾಂಡ್ ಸೊಭಾಣ್ ತಿಂಗಳ ವೇದಿಕೆ ದಾಖಲೆ ಪುಸ್ತಕಗಳಲ್ಲಿ ದಾಖಲಿಸುವಂತಹ ಸಾಧನೆ. ಕಲಾವಿದರಿಗೆ ವೇದಿಕೆ ಕೊಟ್ಟ ಈ ಸರಣಿಯಿಂದ ಕೊಂಕಣಿಗೆ ಬಹು ದೊಡ್ಡ ಗೌರವ ಲಭಿಸಿದೆ. ಇಂತಹ ಸಾಧನೆಗಾಗಿ ಮಾಂಡ್ ಸೊಭಾಣ್ ಸಂಸ್ಥೆಯನ್ನು ಸರಕಾರ ಗೌರವಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಮಾಂಡ್ ಸೊಭಾಣ್ ಕಲಾಂಗಣದಲ್ಲಿ ಜ.4ರಂದು ಆಯೋಜಿಸಲಾದ ತಿಂಗಳ ವೇದಿಕೆ ಸರಣಿಯ ರಜತ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಗೌರವ ಅತಿಥಿ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಬೆಂಗಳೂರು ಸಂಸ್ಥೆಯ ನವೀಕೃತ ಜಾಲತಾಣವನ್ನು ಲೊಕಾರ್ಪಣೆಗೊಳಿಸಿದರು. ನವೀಕೃತ ಜಾಲತಾಣ ಬಗ್ಗೆ ಕೇರನ್ ಮಾಡ್ತಾ ಮಾಹಿತಿ ನೀಡಿದರು. ನವೀಕೃತ ಜಾಲತಾಣ ರೂಪಿಸಿದ ತಂಡದ ವಿಕಾಸ್ ಲಸ್ರಾದೊ ತಾಂತ್ರಿಕ ಸಹಾಯ ಒದಗಿಸಿದ ಟೆಕ್‌ಹಾರ್ಮೊನಿಕ್ಸ್ ಇದರ ಅಜಯ್ ಡಿ ಸೋಜ ,ಆನಿ ಪ್ರಿನ್ಸನ್ ಕಾರ್ಡೊಜಾ ಇವರನ್ನು ಗೌರವಿಸಲಾಯಿತು.
ತಿಂಗಳ ವೇದಿಕೆ ಸರಣಿಗೆ ನೀಡಿದ ಸಹಕಾರಕ್ಕಾಗಿ ಆಸ್ಟಿನ್ ರೋಚ್‌ರನ್ನು ಸನ್ಮಾನಿಸಲಾಯಿತು.
ಆಸ್ಟ್ರೇಲಿಯಾದ ಸಾಫ್ಟ್‌ವೇರ್ ತಜ್ಞ ಪ್ರಜೋತ್ ಡೆಸಾರಿಂದ ಸಂಗೀತ ರಸಮಂಜರಿ ನಡೆಯಿತು. ಸೋನಲ್ ಮೊಂತೇರೊ, ಕ್ಲಿಯೊನ್ ಡಿಸಿಲ್ವಾ ಆಯುಶ್ ಮಿನೇಜಸ್, ಬ್ಲೂ ಏಂಜಲ್ಸ್ ಕೊಯರ್ ಇವರು ಗಾಯನದಲ್ಲಿ ಹಾಗೂ ರಸೆಲ್ ರೊಡ್ರಿಗಸ್, ಹೃಷಿಕೇಶ್ ಉಪಾಧ್ಯಾಯ, ಜೊಸ್ವಿನ್ ಡಿಕುನ್ಹಾ ಮತ್ತು ಮಿಲ್ಟನ್ ಬ್ರಾಗ್ಸ್ ಸಂಗೀತದಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ - 2026 ಇದರ ಮಂಜೂರಾತಿ ಪತ್ರವನ್ನು ಜಾಸ್ಮಿನ್ ಲೋಬೊ ಆಗ್ರಾರ್‌ರಿಗೆ ಹಸ್ತಾಂತರಿಸಲಾಯಿತು. ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಿ ಕ್ರಾಸ್ತಾ ಮತ್ತು ಕೋಶಾಧಿಕಾರಿ ಸುನಿಲ್ ಮೊಂತೆರೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಸ್ವಾಗತಿಸಿ , ವಿತೊರಿ ಕಾರ್ಕಳ ಸಭಾ ಕಾರ್ಯಕ್ರಮ ನಿರೂಪಿಸಿದರು.







