ಬಂಟ್ವಾಳ | ಸರಪಾಡಿ ಸರ್ಕಾರಿ ಪ್ರೌಢ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಎಸ್‌ಐಒ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ದಾನಿಗಳ ನೆರವಿನಿಂದ ವಿದ್ಯಾರ್ಥಿ ಸಂಘಟನೆಯಾದ ಎಸ್‌ಐಒನ ಪದಾಧಿಕಾರಿಗಳು ಎರಡು ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ.
ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಸ್‌ಐಒ ಕರ್ನಾಟಕ ಘಟಕದ ವತಿಯಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ʼಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕʼ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್‌ಐಒ ಪದಾಧಿಕಾರಿಗಳು ತೆರಳಿ, ಬಹುಮಾನ ನೀಡಿ ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿತ್ತು. ಅಭಿಯಾನದ ಭಾಗವಾಗಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಗಿತ್ತು .ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಸರಪಾಡಿ ಸರ್ಕಾರಿ ಪ್ರೌಢ ಶಾಲೆಯ ಆದಮ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತು. ಎಸ್ಐಒ ಪಾಣೆಮಂಗಳೂರು ಘಟಕದ ವತಿಯಿಂದ ಅವರನ್ನು ಭೇಟಿಯಾಗಿ ಶುಭ ಹಾರೈಸಿದ ಸಂದರ್ಭದಲ್ಲಿ ಎಸ್ಐಒ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯುವಂತಾಗಲೂ ಸಂಘಟನೆ ವತಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ಮನಗಂಡ ಎಸ್‌ಐಒ ಪಾಣೆಮಂಗಳೂರು ಘಟಕದ ಪದಾಧಿಕಾರಿಗಳು ದಾನಿಗಳನ್ನು ಭೇಟಿಯಾಗಿ ಶಾಲೆಗೆ ಎರಡು ಕಂಪ್ಯೂಟರ್ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾದರು.
ಇಂದು ಶಾಲೆಯಲ್ಲಿ ಕಂಪ್ಯೂಟರ್ ಅನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಆದಮ್, "ಎಸ್ಐಒ ಸಂಘಟನೆಗೆ ತಾನು ಆಭಾರಿ ಆಗಿದ್ದೇನೆ . ನಾನು ಕಲಿಸದಿದ್ದರೂ ಶಿಕ್ಷಣ ನೀಡುವ ಎಲ್ಲಾ ಶಿಕ್ಷಕರನ್ನು ಗೌರವಿಸುವ ಒಂದು ಗುಣ ನನ್ನ ಜೀವನದಲ್ಲಿ ಇದುವರೆಗೂ ಅನುಭವ ಆಗಿಲ್ಲ ಮತ್ತು ಹಲವಾರು ದಾನಿಗಳನ್ನು ಭೇಟಿಯಾಗಿ ಒಂದೂವರೆ ತಿಂಗಳೊಳಗೆ ನಾನಿಟ್ಟ ಬೇಡಿಕೆಯನ್ನು ಈಡೇರಿಸಿದ್ದೀರಿ. ಒಂದು ಸಂಘಟನೆಯಲ್ಲಿ ಸೇರಿ ಸಮಾಜಕ್ಕೆ ಪ್ರಯೋಜನ ವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಅದರಲ್ಲೂ ವಿದ್ಯಾರ್ಥಿ ಸಂಘಟನೆಯಾಗಿ ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಯಾರಿಗೂ ಸಿಗುವುದಿಲ್ಲ. ದೇವರ ಅನುಗ್ರಹ ಸದಾ ಇರಲಿ" ಎಂದು ಆಶಿಸಿದರು.
ನಂತರ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿನೋಲ ಸಿವಿಲ್ಯ ಪಿಂಟೋ, ದೇಶದ ಹಿತಕ್ಕಾಗಿ ನಾಡಿನ ಉದ್ಧಾರಕ್ಕಾಗಿ ವಿದ್ಯಾರ್ಥಿಗಳು, ಯುವಕರು ಇಂತಹ ಗುಣಗಳನ್ನು ಮೈಗೂಡಿಸಬೇಕು. ಮಕ್ಕಳು ಸಮಾಜವನ್ನು ಅರ್ಥಮಾಡಿ ಒಳ್ಳೆಯ ದಾರಿಯಲ್ಲಿ ನಡೆಯಬೇಕು ಎಂದರು.
ನಂತರ ಎಸ್ಐಒ ಪಾಣೆಮಂಗಳೂರು ಘಟಕದ ವತಿಯಿಂದ ಕಂಪ್ಯೂಟರ್ ಅನ್ನು ಎಸ್‌ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಶಾಲೆಗೆ ಹಸ್ತಾಂತರ ಮಾಡಲಾಯಿತು.
ನಂತರ ಮಾತನಾಡಿದ ಎಸ್ ಐ ಒ ಪಾಣೆಮಂಗಳೂರು ಘಟಕದ ಅಧ್ಯಕ್ಷರಾದ ಚೆಂಡಾರಿ ಮುಬಾರಿಶ್, "ಸವಿದ್ಯಾರ್ಥಿಗಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ, ಪ್ರೀತಿಯನ್ನು ಹಂಚುವ ಮೂಲಕ ದೇಶ ಸೇವೆಯನ್ನು ಮಾಡಬೇಕು. ಯಾವುದೇ ಧರ್ಮ ಮನುಷ್ಯರನ್ನು ಪ್ರೀತಿಸಲು ಹೇಳಿದೆ ಹೊರತು ದ್ವೇಷಿಸಲು ತಿಳಿಸಿಲ್ಲ. ಸರ್ವೇ ಜನ ಸುಖಿನೋ ಭವಂತು. ಇದರಲ್ಲಿ ಎಲ್ಲ ಮಾನವ ಸಮೂಹಕ್ಕೆ ಸುಖದ ಪ್ರಾರ್ಥನೆ ಇದೆ ಹೊರತು ಅದರಲ್ಲಿ ಬೇರೆ ಬೇರೆ ಧರ್ಮ/ಜಾತಿಗಳನ್ನು ಹೆಸರನ್ನು ಸೂಚಿಸಿಲ್ಲ . ವಿದ್ಯಾರ್ಥಿಗಳು ವಿದ್ಯೆಯನ್ನು ಕೇವಲ ಅಂಕಗಳಿಗೋಸ್ಕರ ಮಾತ್ರ ಪಡೆಯದೇ ಉತ್ತಮ ಶಿಕ್ಷಣ ಪಡೆದು ಶಾಂತಿಯ ಸಹನೆಯ ಪ್ರೀತಿ ವಿಶ್ವಾಸದ ದೇಶ ಕಟ್ಟುವಂತಾಗಬೇಕೆಂದರು.
ನಂತರ ಮಾತನಾಡಿದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಪುರುಷೋತ್ತಮ ಬಿ, "ಸಂಘ ಸಂಸ್ಥೆಗಳನ್ನು ಕಟ್ಟುವುದು ದೊಡ್ಡ ವಿಷಯವಲ್ಲ.ಆದರೆ ಅವುಗಳನ್ನು ನಡೆಸಿಕೊಂಡು ಹೋಗುವುದು ಕಷ್ಟ. ನಿಮ್ಮನ್ನು ನೋಡಲು ತುಂಬಾ ಖುಷಿಯಾಗುತ್ತದೆ ಹಾಗೂ ಹೆಮ್ಮೆ ಅನಿಸುತ್ತದೆ. ಬ್ಯಾಟ್ ಹಿಡಿದುಕೊಂಡು ಆಡುವ ಈ ಸಮಯದಲ್ಲಿ ಒಂದು ಮೂಲೆಯಲ್ಲಿರುವ ಸರಪಾಡಿ ಶಾಲೆಗೆ ಬಂದು ಹಾಗೂ ಇನ್ನಿತರ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳ ತೊಂದರೆಗಳಿಗೆ ಸ್ಪಂದಿಸುವಂತಹ ಮನಸ್ಸು ಭಗವಂತ ಎಲ್ಲರಿಗೂ ನೀಡುವುದಿಲ್ಲ. ನಮ್ಮ ವಿದ್ಯಾರ್ಥಿಗಳ ಯಶಸ್ವಿನ ಹಿಂದೆ ನಿಮ್ಮ ಈ ತ್ಯಾಗ ಸದಾ ಜೀವಂತ ಇರುತ್ತದೆ. ಸರಪಾಡಿ ಎಂಬುದು ದೈವಿಕ ಶಕ್ತಿಯುಳ್ಳ ಪ್ರದೇಶವಾಗಿದೆ. ನಿಮ್ಮ ಇಂತಹ ಸೇವೆಗೆ ಭಗವಂತನ ಮೆಚ್ಚುಗೆ ಇರುತ್ತದೆ" ಎಂದು ಶುಭ ಹಾರೈಸಿದರು .
ಶಿಕ್ಷಕಿ ಕಿಶೋರಿ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಎಸ್ಐಒ ಸಂಘಟನೆಯ ಜಿಲ್ಲಾಧ್ಯಕ್ಷ ರಿಝ್ವಾನ್ , ಎಸ್ಐಒ ಪಾಣೆಮಂಗಳೂರು ಘಟಕದ ಸದಸ್ಯರಾದ ಇಸ್ಮಾಯಿಲ್, ಮುತಹರ್, ಅಫ್ಸಾನ್ ಬೋಳಂಗಡಿ ಉಪಸ್ಥಿತರಿದ್ದರು.







