ಸ್ಮಾರ್ಟ್ ಸಿಟಿ ಟ್ರೋಫಿ ಪುಟ್ಬಾಲ್ ಟೂರ್ನಿ: ಮಣಿಪಾಲ್ ಸ್ಕೂಲ್ ತಂಡಕ್ಕೆ ಅವಳಿ ಪ್ರಶಸ್ತಿ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನವೀಕರಣಗೊಂಡ ನಗರದ ಫುಟ್ಬಾಲ್ ಮೈದಾನದಲ್ಲಿ ನಡೆದ ಮೊದಲ ಸ್ಮಾರ್ಟ್ ಸಿಟಿ ಕಪ್ ಫುಟ್ಬಾಲ್ ಪಂದ್ಯಾಟದ ಅಂಡರ್ 17 ಬಾಲಕರ ಹಾಗೂ ಬಾಲಕಿಯರ ಎರಡು ವಿಭಾಗಗಳಲ್ಲೂ ಮಣಿಪಾಲ್ ಸ್ಕೂಲ್ ತಂಡ ಜಯ ಗಳಿಸಿ ಚಾಂಪಿಯನ್ ಟ್ರೋಫಿ ಪಡೆಯಿತು.
ಬಾಲಕರ ವಿಭಾಗದಲ್ಲಿ ಬದ್ರಿಯಾ ಮಂಗಳೂರು ತಂಡ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕಾರ್ಕಳದ ನಿಟ್ಟೆ ಎನ್.ಎಸ್.ಎ.ಎಂ. ಸ್ಕೂಲ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಅಂಡರ್ 14 ಬಾಲಕರ ವಿಭಾಗದಲ್ಲಿ ಯೆನೆಪೊಯ ಸ್ಕೂಲ್ ಮಂಗಳೂರು ಪ್ರಥಮ, ನಿಟ್ಟೆ ಎನ್.ಎಸ್.ಎ.ಎಂ. ತಂಡ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಜಾಯ್ ಲ್ಯಾಂಡ್ ಕೊಲ್ಯ ಪ್ರಥಮ, ಹಾಗೂ ಮಣಿಪಾಲ್ ಸ್ಕೂಲ್ ದ್ವಿತೀಯ ಸ್ಥಾನ ಪಡೆಯಿತು.
ಬಹುಮಾನ ವಿತರಿಸಿದ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡುವುದರಿಂದ ಆರೋಗ್ಯವಂತ ಜೀವನ ಸಾಧಿಸಲು ಸಾಧ್ಯ. ಸರಕಾರ ಕ್ರೀಡಾ ಕ್ಷೇತ್ರದ ಸಾಧಕರಿಗೆ ನಿರಂತರ ಬೆಂಬಲ ನೀಡುತ್ತಿದೆ ಎಂದರು.
ನವೀಕರಣಗೊಂಡಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಈ ಮೈದಾನ ಮಂಗಳೂರಿನ ಕ್ರೀಡಾಪಟುಗಳಿಗೆ ದೊಡ್ಡ ಕೊಡುಗೆಯಾಗಿದ್ದು, ಇದರ ಸದುಪಯೋಗ ಪಡೆಯುವಂತೆ ಸಚಿವರು ಕರೆ ನೀಡಿದರು.
ಇನಾಯತ್ ಅಲಿ, ಸುಲ್ತಾನ್ ಗೋಲ್ಡ್ ನ ಚೆಯರ್ ಮ್ಯಾನ್ ರವೂಫ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪ್ರಮುಖರಾದ ವಿಜಯ್ ಸುವರ್ಣ, ಅಬ್ದುಲ್ಲತೀಫ್, ಆರಿಫ್ ಉಚ್ಚಿಲ್, ಅಶ್ಫಾಕ್, ಅನಿಲ್ ಪಿ.ವಿ., ಫಿರೋಝ್ ಮುಂತಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಸ್ವಾಗತಿಸಿದರು. ಸಿಯಾಝ್ ಕಾರ್ಯಕ್ರಮ ನಿರೂಪಿಸಿದರು.







