ದೇಶ ವಿದೇಶಗಳಲ್ಲಿ ಏಕಕಾಲದಲ್ಲಿ ನಡೆದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆ

ಮಂಗಳೂರು, ನ.29 : ಸಮಸ್ತ ಕೇರಳ ಸುನ್ನಿ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುವ ಮದ್ರಸಗಳಲ್ಲಿ 3ರಿಂದ 12ನೇ ತರಗತಿಯ ವಿದ್ಯಾರ್ಥಿಗಳಲ್ಲಿನ ಕೌಶಲ್ಯ ವೃದ್ಧಿಪಡಿಸಲು, ಮದ್ರಸ ಅಧ್ಯಯನದಲ್ಲಿ ಆಸಕ್ತಿ ಮೂಡಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಮಸ್ತ ಕೇರಳ ಸುನ್ನಿ ಶಿಕ್ಷಣ ಮಂಡಳಿಯು ನಡೆಸುವ ಎರಡನೇ ಹಂತದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯು ಶನಿವಾರ ಕೇರಳ, ತಮಿಳುನಾಡು, ಕರ್ನಾಟಕ, ಲಕ್ಷದ್ವೀಪ, ಸೌದಿ ಅರೇಬಿಯಾ, ಬಹರೈನ್, ಕತಾರ್, ಯುಎಇ, ಓಮನ್, ಕುವೈತ್ ಸಹಿತ 3,200 ಕೇಂದ್ರಗಳಲ್ಲಿ ನಡೆಯಿತು.
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ 1,02,500 ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಿದರು. ಒಎಂಆರ್ ತಂತ್ರಜ್ಞಾನವನ್ನು ಬಳಸಿಕೊಂಡು ನಾಗರಿಕ ಸೇವೆಗಳ ಪರೀಕ್ಷೆಯ ಮಾದರಿಯಲ್ಲಿ ಪರೀಕ್ಷೆಗೆ ತಯಾರು ಮಾಡಲಾಗಿತ್ತು.
ಒಬ್ಬ ಮುಖ್ಯ ಪರಿವೀಕ್ಷಕರು ಮತ್ತು 30 ವಿದ್ಯಾರ್ಥಿಗಳಿಗೆ ಒಬ್ಬ ಪರಿವೀಕ್ಷಕರು ಸಹಿತ ವಿಶೇಷ ತರಬೇತಿ ಪಡೆದ 6,500 ಶಿಕ್ಷಕರು ಮುಖ್ಯ ಪರೀಕ್ಷೆಯನ್ನು ನಡೆಸಿದರು.
ಎಸ್ಜೆಎಂ ರಾಜ್ಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎಂ.ಮದನಿ ಸಹಿತ 200ಕ್ಕೂ ಅಧಿಕ ಅಧೀಕ್ಷಕರು ಈ ಪರೀಕ್ಷೆ ನಡೆಸಿದ ಇನ್ವಿಲೇಜಟರ್ ಗಳಿಗೆ ವಿಶೇಷ ತರಬೇತಿ ನೀಡಿದ್ದರು.







