ದುಷ್ಟ ಶಕ್ತಿಗಳನ್ನು ದೂರ ಇಡುವಲ್ಲಿ ಸಮಾಜ ಒಂದಾಗಬೇಕು: ಯು.ಟಿ.ಖಾದರ್

ಯು.ಟಿ.ಖಾದರ್
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದಿರುವ ಘಟನೆಗಳು ನೋವು ತಂದಿದೆ. ಜಿಲ್ಲೆಗೆ ವಿಶೇಷವಾದ ಗೌರವ, ಇತಿಹಾಸವಿದ್ದು, ಸಮಾಜದ ದುಷ್ಟ ಶಕ್ತಿಗಳನ್ನು ದೂರ ಇಡುವಲ್ಲಿ ಸಮಾಜ ಒಂದಾಗಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಪವಿತ್ರ ಹಜ್ ಯಾತ್ರೆಯಿಂದ ಮಂಗಳವಾರ ವಾಪಾಸಾಗಿರುವ ಅವರು, ಬುಧವಾರ ಸರ್ಕ್ಯೂಟ್ ಹೌಸ್ನಲ್ಲಿ ಜನರಿಂದ ಅಹವಾಲು ಸ್ವೀಕರಿಸಿ, ಸಂಚಾರಿ ಆರೋಗ್ಯ ಘಟಕ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಶೇ.95ರಷ್ಟು ಜನ ದುಷ್ಟ ಶಕ್ತಿಗಳಿಂದ ದೂರ ಇರುವವರು. ಅವರೆಲ್ಲಾ ಒಂದಾಗಬೇಕು ಎಂದು ಹೇಳಿದ ಅವರು, ಜಿಲ್ಲೆಯಲ್ಲಿನ ಬೆಳವಣಿಗೆಗಳ ಬಗ್ಗೆ ಜಿಲ್ಲಾಧಿಕಾರಿ, ಕಮಿಷನರ್ ಹಾಗೂ ಎಸ್ಪಿ ಜತೆ ಚರ್ಚಿಸಿದ್ದೇನೆ ಎಂದರು.
ಮಾನವೀಯತೆ ಮತ್ತು ಸಮಾನತೆಯ ಸಂಕೇತವಾಗಿ ಹಜ್ ಯಾತ್ರೆ ನಡೆಸಿದ್ದು, ಸಮಸ್ತ ನಾಗರಿಕರಿಗೆ ಪ್ರಾರ್ಥನೆಯ ಜೊತೆಗೆ ವಿಶ್ವಾಸ ಭರಿತ ಸಮಾಜ, ಅಭಿವೃದ್ಧಿಯ ಕರ್ನಾಟಕ, ಬಲಿಷ್ಟವಾದ ಭಾರತ, ವಿಶ್ವದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ್ದೇನೆ ಎಂದರು.
ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ನಾಯಕರ ರಾಜೀನಾಮೆ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸ್ಪೀಕರ್ ಆಗಿ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಯಾವುದೇ ರಾಜಕೀಯ ವಿದ್ಯಮಾನ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ ಆ ಬಗ್ಗೆ ಪಕ್ಷದ ಮುಖಂಡರ ಜೊತೆ ಚರ್ಚಿಸಿ, ಕ್ರಮ ವಹಿಸಲಿದ್ದಾರೆ ಎಂದರು.