ಸೋಮೇಶ್ವರದಲ್ಲಿ ವಿಪರೀತ ನಾಯಿಗಳ ಕಾಟ; ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ

ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ವಿಪರೀತಗೊಂಡಿರುವ ನಾಯಿಗಳ ಕಾಟ ಮತ್ತದರ ಪರಿಹಾರದ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಉಳ್ಳಾಲ ಸಬ್ ಇನ್ಸ್ಪೆಕ್ಟರ್ ಸಂತೋಷ್ ಮಾತನಾಡಿ, ಕುಂಪಲ ಬೈಪಾಸ್ ಬಳಿ ವಾರದ ಹಿಂದೆ ನಡೆದ ದಯಾನಂದ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಾಣಿಗಳ ದಾಳಿಯಿಂದ ಮುಖಕ್ಕೆ ಆಗಿರುವ ಗಾಯಗಳಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ . ಆರ್ ಎಫ್ ಎಸ್ ಎಲ್ ವರದಿ ಇನ್ನು ಬರಬೇಕಾಗಿದೆ ಎಂದು ಹೇಳಿದರು.
ನಾಯಿಗಳ ಕಾಟದ ಬಗ್ಗೆ ಸೂಕ್ತ ಚರ್ಚೆ ಮಾಡಿ ತೀರ್ಮಾನ ಆಗಬೇಕು ಎಂದು ಉಪಾಧ್ಯಕ್ಷ ರವಿಶಂಕರ್ ಹೇಳಿದರು.
ಕುಂಪಲದಲ್ಲಿ ಒಂದು ಘಟನೆ ನಡೆದು ಹೋಗಿದೆ. ಸೋಮೇಶ್ವರ ವ್ಯಾಪ್ತಿಯಲ್ಲಿ ನಾಯಿಗಳ ಕಾಟ ಜಾಸ್ತಿ ಇದೆ. ಇದಕ್ಕೆ ಪರಿಹಾರ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಒತ್ತಾಯಿಸಿದರು.
ಪಶು ಸಂಗೋಪನಾ ಇಲಾಖೆ ಅಧಿಕಾರಿ ರಚನಾ ಮಾತನಾಡಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಆಗುತ್ತದೆ. ನಾಯಿಗಳ ಬೆಳವಣಿಗೆ ಆಗದಂತೆ ಸಂತಾನ ಹರಣ ಚಿಕಿತ್ಸೆ ಆಗಿದೆ. ಬೀದಿ ನಾಯಿಗಳಿಗೆ ರಸ್ತೆ ಬದಿ ಊಟ ಹಾಕುತ್ತಾರೆ. ಇದರಿಂದ ನಾಯಿ ಅದೇ ಜಾಗದಲ್ಲಿ ಸೇರುತ್ತದೆ ದಯಾನಂದ್ ಸಾವಿಗೆ ಕಾರಣ ಎನ್ನಲಾದ ನಾಯಿ ಹುಚ್ಚು ನಾಯಿ ಅಲ್ಲ ಎಂದು ಹೇಳಿದಾಗ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
ಮೊನ್ನೆ ನಡೆದ ಘಟನೆಯಿಂದ ಸೋಮೇಶ್ವರ ಪುರಸಭೆಗೆ ಕಪ್ಪು ಚುಕ್ಕೆ ಆಗಿದೆ. ಇನ್ನಾದರೂ ನಾಯಿಗಳ ನಿಯಂತ್ರಣ ಆಗಬೇಕು. ಸಾಂಕ್ರಾಮಿಕ ರೋಗಗಳು ತಡೆಗಟ್ಟುವ ಕೆಲಸ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದರು.
321 ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಆಗಿದೆ. ನಾಯಿಗಳ ಸಂಖ್ಯೆ ಜಾಸ್ತಿ ಇದೆ. ಪ್ರಾಣಿ ದಾಳಿಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂಬ ಶಂಕೆ ಅಧಿಕಾರಿಗಳಿಂದ ವ್ಯಕ್ತವಾಗಿದೆ. ಅಗತ್ಯ ಒದಗಿ ಬಂದಲ್ಲಿ ಐದು ಲಕ್ಷ ಪರಿಹಾರ ನೀಡಲು ತಯಾರಿದ್ದೇವೆ. ಸತ್ತ ನಾಯಿಗಳನ್ನು ಇಲಾಖೆ ಅಧಿಕಾರಿಗಳು ಜೊತೆಗೂಡಿ ಕಾರ್ಯ ನಿರ್ವಹಣೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಆಗಬೇಕು ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು. ಈ ಬಗ್ಗೆ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಬೀರಿಯಲ್ಲಿ ಹೆದ್ದಾರಿಯಲ್ಲೇ ಬಸ್ ನಿಲ್ಲಿಸುತ್ತಾರೆ. ಈ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆ ಆಗಿತ್ತು. ಈ ವೇಳೆ ಸಂಚಾರಿ ಪೊಲೀಸರು ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಭರವಸೆ ನೀಡಿದ್ದರು. ಇದರ ಬಳಿಕವೂ ಬಸ್ ಹೆದ್ದಾರಿಯಲ್ಲೇ ನಿಲುಗಡೆ ಆಗುತ್ತದೆ. ಉಚ್ಚಿಲದಲ್ಲೂ ಸರ್ವಿಸ್ ರಸ್ತೆಯಲ್ಲಿ ಬಸ್ ನಿಲುಗಡೆ ಮಾಡುವುದಿಲ್ಲ. ಇದಕ್ಕೆ ಕ್ರಮ ಆಗಬೇಕು ಎಂದು ಸಲಾಮ್ ಉಚ್ಚಿಲ ಒತ್ತಾಯಿಸಿದರು.
ಬಸ್ ನಿಲುಗಡೆ ವಿಚಾರದಲ್ಲಿ ಖಾಸಗಿ ಬಸ್ ಮಾಲಕರ ಸಂಘ ಇದೆ. ಅವರು ಜವಾಬ್ದಾರಿ ನಿರ್ವಹಿಸಬೇಕು. ಇಲಾಖೆ ವತಿಯಿಂದ ದಂಡ ವಿಧಿಸಿ ಪರವಾನಿಗೆ ರದ್ದು ಮಾಡಲು ಮಾತ್ರ ಸಾಧ್ಯ. ನಾವು ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ.
ಕೊಲ್ಯದಲ್ಲಿ ಬಹಳಷ್ಟು ಅಂಗಡಿಗಳಿವೆ. ಸಿ.ಸಿ. ಕ್ಯಾಮರಾ ಅಳವಡಿಸುವಂತೆ ನೊಟೀಸ್ ನೀಡಲಾಗಿದೆ. ಆದರೂ ಸಿ.ಸಿ ಕ್ಯಾಮರಾ ವ್ಯವಸ್ಥೆ ಆಗಿಲ್ಲ.ಅಲ್ಲಿ ಯಾವುದೇ ಘಟನೆ ನಡೆದರೂ ಗೊತ್ತಾಗುತ್ತಿಲ್ಲ ಎಂದು ಉಳ್ಳಾಲ ಠಾಣಾ ಉಪ ನಿರೀಕ್ಷಕ ಸಂತೋಷ್ ಸಭೆಯ ಗಮನ ಸೆಳೆದರು.
ಕೊಲ್ಯದಲ್ಲಿ ಸಿಸಿ ಕ್ಯಾಮೆರಾ ಇಲ್ಲದ ಅಂಗಡಿಗಳಿಗೆ ಉದ್ದಿಮೆ ಪರವಾನಿಗೆ ನೀಡಬಾರದು. ಅವರ ವಿರುದ್ಧ ಕ್ರಮ ಆಗಬೇಕು ಎಂದು ಮನೋಜ್ ಹೇಳಿದರು.
ಈಗಾಗಲೇ ಡಿ ಮಾರ್ಟ್ ಗೆ ಸಿ.ಸಿ ಕ್ಯಾಮರಾ ಹಾಕಲು ಹೇಳಿದ್ದೇವೆ. ಅವರು ಹಾಕುತ್ತಾರೆ. ಒಂದು ವಾರದೊಳಗೆ 15 ಕಡೆ ಸಿ.ಸಿ ಕ್ಯಾಮರಾ ಹಾಕುವ ಕೆಲಸ ನಡೆಯಲಿದೆ ಎಂದು ಉಪಾಧ್ಯಕ್ಷ ರವಿಶಂಕರ್ ಹೇಳಿದರು.
ಕುಡಿಯುವ ನೀರು ಸರಬರಾಜು ಮಾಡುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಿ ಎಂದು ಕುಡಿಯುವ ನೀರು ಸರಬರಾಜು ಸಹಾಯಕ ಇಂಜಿನಿಯರ್ ಶ್ರೀಕಾಂತ್ ಗೆ ಸದಸ್ಯರು ಗಮನ ಸೆಳೆದರು
ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.







