ನ.7, 8ರಂದು ಮೀಫ್ ವತಿಯಿಂದ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ವಿದ್ಯಾ ಸಂಸ್ಥೆಗಳ ಎಸೆಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಲು, ಮೀಫ್ (ಮುಸ್ಲಿಮ್ ವಿದ್ಯಾ ಸಂಸ್ಥೆಗಳ ಒಕ್ಕೂಟ) ಹಲವು ತರಬೇತಿ ಕಾರ್ಯಕ್ರಮಗಳನ್ನು ಕಳೆದ ವರ್ಷಗಳಂತೆ ಈ ವರ್ಷವೂ ಆಯೋಜಿಸಿದೆ.
ಪ್ರಥಮ ಹಂತವಾಗಿ ನ.7ಮತ್ತು 8ರಂದು ಎಸೆಸೆಲ್ಸಿ ವಿಷಯವಾರು ಶಿಕ್ಷಕರಿಗೆ ಇಲಾಖೆಯ ವತಿಯಿಂದ ನುರಿತ ತರಬೇತುದಾರರಿಂದ ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಜೆಪ್ಪಿನಮೊಗರುವಿನ ಓಶಿಯನ್ ಗ್ಲೋಬಲ್ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ (ಡಿಡಿಪಿಐ) ಜಿ. ಯಸ್. ಶಶಿಧರ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಓಶಿಯನ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕ ಇನಾಯತ್ ಅಲಿ ಹಾಗೂ ಮಾಜಿ ಕಾರ್ಪರೇಟರ್ ಎ.ಸಿ.ವಿನಯ್ ರಾಜ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರಕ್ಕೆ ಈಗಾಗಲೇ ಸುಮಾರು 50 ವಿದ್ಯಾ ಸಂಸ್ಥೆಗಳ 225ಕ್ಕೂ ಅಧಿಕ ಶಿಕ್ಷಕರು ನೋಂದಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಓಶಿಯನ್ ಗ್ಲೋಬಲ್ ವಿದ್ಯಾ ಸಂಸ್ಥೆ ವಹಿಸಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಮುಸ್ಲಿಂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳು ಈ ಉಪಯುಕ್ತ ಕಾರ್ಯಾಗಾರದ ಪ್ರಯೋಜನ ಪಡೆಯುವಂತೆ ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.







