ಎಸ್ಸೆಸ್ಸೆಲ್ಸಿ ಪರೀಕ್ಷೆ ಮರುಮೌಲ್ಯಮಾಪನ; ಮೂಡುಬಿದಿರೆಯ ನುಮಾ ಮುಸ್ತಾಕ್ ಗೆ 622 ಅಂಕ

ಮೂಡುಬಿದಿರೆ: ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ನುಮಾ ಮುಸ್ತಾಕ್ ಅವರು ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ನಂತರ ಅತ್ಯುತ್ತಮ ಅಂಕಗಳನ್ನು ಪಡೆದಿದ್ದಾರೆ. ಈ ಸಾಧನೆಯ ಮೂಲಕ ಅವರು ಶಾಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ.
ಈ ಹಿಂದೆ 618 ಅಂಕಗಳನ್ನು (98.88%) ಗಳಿಸಿದ್ದ ನುಮಾ, ಮರುಮೌಲ್ಯಮಾಪನದ ನಂತರ ತಮ್ಮ ಒಟ್ಟು ಅಂಕಗಳನ್ನು 622/625 (ಶೇ. 99.52) ಕ್ಕೆ ಹೆಚ್ಚಿಸಿಕೊಂಡಿದ್ದಾರೆ.
ಈ ಹಿಂದೆ ಗಣಿತದಲ್ಲಿ 97, ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿದ್ದ ನುಮಾ, ಮರುಮೌಲ್ಯಮಾಪನದ ನಂತರ ಗಣಿತದಲ್ಲಿ 3 ಹೆಚ್ಚುವರಿ ಅಂಕಗಳನ್ನು ಪಡೆದು 100ಕ್ಕೆ 100 ಹಾಗೂ ಸಮಾಜ ವಿಜ್ಞಾನದಲ್ಲಿ ಹೆಚ್ಚುವರಿ 1 ಅಂಕ ಪಡೆದು 99 ಅಂಕಗಳನ್ನು ಸಂಪಾದಿಸಿದ್ದಾರೆ.
ನುಮಾ ಅವರು ಮೂಡುಬಿದಿರೆಯ ಮುಸ್ತಾಕ್ ಹಮೀದ್ ಮತ್ತು ಸುರಯ್ಯ ದಂಪತಿಯ ಪುತ್ರಿ. ಇವರು ದಿವಂಗತ ಪಣಂಬೂರು ಹಮೀದ್ ಹಾಗೂ ಬಜಪೆಯ ದಿವಂಗತ ಉಞ್ಞಿ ಅವರ ಮೊಮ್ಮಗಳಾಗಿದ್ದಾರೆ.
ನುಮಾ ಅವರ ಈ ಅದ್ಭುತ ಸಾಧನೆಗೆ ಕುಟುಂಬಸ್ಥರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಹಿತೈಷಿಗಳು ಅಭಿನಂದಿಸಿದ್ದಾರೆ.





