ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಮನೆ ಕಟ್ಟಲು 2.75 ಸೆಂಟ್ಸ್ ಜಾಗವನ್ನು ರಾಜ್ಯ ಸರಕಾರ ಮಂಜೂರು ಮಾಡಲಿದೆ: ಶಾಸಕ ಅಶೋಕ್ ರೈ

ವಿಟ್ಲ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಜಾಗಕ್ಕೆ ಅರ್ಜಿ ಸಲ್ಲಿಸಿದವರಿಗೆ 2.75 ಸೆಂಟ್ಸ್ ಜಾಗವನ್ನು ರಾಜ್ಯ ಸರಕಾರ ಮಂಜೂರು ಮಾಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ವಿಟ್ಲ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಅಂದಿನ ರಾಜ್ಯ ಸರಕಾರ 1.38 ಸೆಂಟ್ಸ್ ಸ್ಥಳವನ್ನು ಮಂಜೂರು ಮಾಡಿತ್ತು. ಆದರೆ ಅದರಲ್ಲಿ ಮನೆ ಕಟ್ಟಲು ಅಸಾಧ್ಯ ವಾದ ಕಾರಣ ಮತ್ತು ಬ್ಯಾಂಕ್ ಸಾಲ ಆ ಜಾಗಗಳಿಗೆ ಮಂಜೂರಾಗದ ಕಾರಣ ಅರ್ಜಿದಾರರು ಅದನ್ನು ಬಿಟ್ಟಿದ್ದರು. ಈ ಬಗ್ಗೆ ಹಿಂದೆಯೂ ಧ್ವನಿ ಎತ್ತಿದ್ದೆ. ಶಾಸಕನಾದ ಬಳಿಕ ನಿರಂತರ ಕಂದಾಯ ಸಚಿವರ ಮೇಲೆ ಒತ್ತಡ ಹೇರಿ 94 ಸಿ ಮತ್ತು 94 ಸಿ ಸಿ ಅಡಿ 2.75 ಸೆಂಟ್ಸ್ ಸ್ಥಳ ಮಂಜೂರು ಮಾಡಿಸುವಲ್ಲಿ ಯಶಸ್ವಿ ಆಗಿದ್ದೇನೆ ಎಂದು ಹೇಳಿದರು. ಈ ಹಿಂದೆ ಇಕಾಖೆಯಿಂದ ತಿರಸ್ಕೃತ, 4,800 ರಷ್ಟು ಅರ್ಜಿಯ ಮರುಶೀಲನೆಗೆ ಒತ್ತಾಯಿಸಿದ್ದೇನೆ ಎಂದು ಶಾಸಕರು ಹೇಳಿದರು.
2015ರ ಮೊದಲು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಮೂವರಿಗೆ ಸಕ್ರಮವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಲೇರಿದ್ದರು. ಇದೀಗ ನ್ಯಾಯಾಲಯದಲ್ಲಿ ಅವರಿಗೆ ಗೆಲುವು ದೊರಕಿದೆ. ಅವರಿಗೆ ಮತ್ತು ಅರ್ಜಿ ಸಲ್ಲಿಸಿದ ಸಲ್ಲಿಸುವ ಎಲ್ಲರಿಗೂ ಜಾಗ ಸಕ್ರಮ ಆಗಲಿದೆ. ಶಾಸಕನಿಗೆ ಅವರಿಗೆ ಸಹಕಾರ ನೀಡುವೆ ಎಂದು ಅವರು ಹೇಳಿದರು
ಕಬಕ- ವಿಟ್ಲ ಚತುಷ್ಪಥ ರಸ್ತೆಗೆ ಮೊದಲ ಹಂತದಲ್ಲಿ ಹತ್ತು ಕೋಟಿ ರೂ. ಅನುದಾನ ಮಂಜೂರು ಆಗಿದೆ. ಶೀಘ್ರವಾಗಿ ಕಾರ್ಯ ಆರಂಭ ಆಗಲಿದೆ. ಹೆದ್ದಾರಿ ಇಲಾಖೆ ಅದರ ನಿರ್ವಹಣೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಶಾಸಕರು ಹೇಳಿದರು.
ವಿಟ್ಲ ಸಮುದಾಯ ಆಸ್ಪತ್ರೆ ಹಿಂಬಡ್ತಿ ಹೊಂದುವ ಸಾಧ್ಯತೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು ಆಸ್ಪತ್ರೆಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಹೆಚ್ಚಿಸಲಾಗುವುದು. ಡಯಾಲಿಸೀಸ್ ಕೇಂದ್ರ ವಿಟ್ಲದಲ್ಲಿ ಆರಂಭ ಆಗಲಿದೆ ಎಂದು ಅವರು ಹೇಳಿದರು. ವಿಟ್ಲಕ್ಕೆ ಅಗ್ನಿಶಾಮಕ ವಾಹನ ಮಂಜೂರು ಆಗಿದೆ. ಸ್ಥಳ ಗುರುತಿಸುವಿಕೆ ನಡೆದ ತಕ್ಷಣ ವಿಟ್ಲದಲ್ಲಿ ಅಗ್ನಿಶಾಮಕ ವಾಹನ ಕಾರ್ಯ ಆರಂಭ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪಲೇಖಾ ಆಳ್ವ, ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ರೈ ಪೆರ್ನೆ, ವಿಟ್ಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.







