ನಂಬಿಕೆ, ವಿಶ್ವಾಸದೊಂದಿಗೆ ಮುನ್ನಡೆದರೆ ಯಶಸ್ಸು: ರಾಜು ಮೊಗವೀರ

ಕೊಣಾಜೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧಕನಾಗಿರುತ್ತಾನೆ. ಎಳೆವೆಯಲ್ಲಿಯೇ ಉತ್ತಮ ಪರಿಶ್ರಮ, ನಂಬಿಕೆ, ಗುರಿ ಉದ್ದೇಶಗಳೊಂದಿಗೆ ಮುನ್ನಡೆದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಮಂಗಳೂರು ವಿವಿ ಕುಲಸಚಿವರಾದ ರಾಜು ಮೊಗವೀರ ಅವರು ಹೇಳಿದರು.
ಅವರು ಮುಡಿಪುವಿನ ಸೂರಜ್ ಪಿಯು ಕಾಲೇಜು ಹಾಗೂ ಜ್ಞಾನದೀಪ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನೆ ಹಾಗೂ ಜ್ಞಾನಾಗಮವಿಕಾಸ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಎಡರು ತೊಡರುಗಳು ಸಾಮಾನ್ಯ. ವಿಶ್ವಾಸದೊಂದಿಗೆ ನಂಬಿಕೆಯನ್ನೇ ಮೂಲವಾಗಿಟ್ಟುಕೊಂಡು ನಾವು ಮುನ್ನಡೆಯಬೇಕು. ಶಿಕ್ಷಣವು ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಬಂಟ್ವಾಳ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಲಲಿತಾ ಕಲೆಗಳು ಸೇರಿದಂತೆ ಸಮಗ್ರ ಶಿಕ್ಷಣಕ್ಕೆ, ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ನಾವು ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ನಾವು ಕಲಿತ ಶಾಲೆ, ಊರು ಮರೆಯದೆ ಸಮಾಜಕ್ಕೆ ನಮ್ಮದೇ ಕೊಡುಗೆ ನೀಡಬೇಕು.
ದ.ಕ.ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕರಾದ ರಾಜೇಶ್ವರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸೂರಜ್ ಸಂಸ್ಥೆಯ ಅಧ್ಯಕ್ಷರಾದ ಡಾ.ಮಂಜುನಾಥ ರೇವಣ್ಕರ್ ಮಾತನಾಡಿ, ಯಾವುದೇ ವ್ಯಕ್ತಿ ಯಶಸ್ಬಿಯಾಗಬೇಕಾದರೆ ಪರಿಶ್ರಮದೊಂದಿಗೆ ಸ್ಪಷ್ಟ ಗುರಿಯಿರಬೇಕು. ಸೂರಜ್, ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಮುನ್ನಡೆಯುತ್ತಿದೆ ಎಂದರು
ಸಂಸ್ಥೆಯ ಗೌರವ ಸಲಹೆಗಾರ ರವೀಂದ್ರ ರೈ ಕಲ್ಲಿಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ ಸ್ವಾಗತಿಸಿದರು. ಶಕ್ಷಕಿ ಶೋಭಿತಾ ಅವರು ನಿರೂಪಿಸಿದರು. ಶಿಕ್ಷಕಿ ಶಾಂತಿ ಅವರು ವಂದಿಸಿದರು.