ಕಠಿಣ ಪರಿಶ್ರಮದ ಮೂಲಕ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ವಿನಾಯಕ್ ನರ್ವಾಡೆ

ಮಂಗಳೂರು, ಜ.28: ಛಲ, ಕಠಿಣ ಪರಿಶ್ರಮದ ಮೂಲಕ ಭಾರತದ ಅತ್ಯಂತ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸಾಧ್ಯ ಎಂದು ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್) ಆಶ್ರಯದಲ್ಲಿ ನಗರದ ಜಪ್ಪಿನಮೊಗರು ಯೆನಪೋಯ ಪಿ.ಯು. ಕಾಲೇಜಿನಲ್ಲಿ ಬುಧವಾರ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರತಿಭಾ ಶೋಧ ‘ಮೀಫ್ -ಸಿವಿಲ್ ಕ್ವೆಸ್ಟ್ 1.0’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮೀಫ್ ಶೈಕ್ಷಣಿಕ ಸಲಹಾ ಮಂಡಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶದ ಅತ್ಯಂತ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಲ್ಲೇ ಆಸಕ್ತಿ ಮೂಡಿಸಿ ಅವರಿಗೆ ಆ ನಿಟ್ಟಿನಲ್ಲಿ ತಯಾರಿ ನಡೆಸಲು ತರಬೇತಿ ನೀಡಲು ಮೀಫ್ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ. ದ.ಕ. ಜಿಲ್ಲಾ ಪಂಚಾಯತ್ ಇದಕ್ಕೆ ಪೂರ್ಣ ಸಹಕಾರ ನೀಡಲಿದೆ ಎಂದರು.
ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಇದೆ. ಇಂತಹ ಪರೀಕ್ಷೆಯಲ್ಲಿ ಆಸಕ್ತಿ ಬೆಳೆಸಿಕೊಂಡ ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು,ಜಗತ್ತಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಇಫ್ತಿಕಾರ್ ಅಲಿ ಫರೀದ್ , ಯೆನೆಪೋಯ ಸಮೂಹ ಸಂಸ್ಥೆಗಳ ನಿರ್ದೇಶಕ ಅಬ್ದುಲ್ಲಾ ಜಾವೇದ್, ಮಂಗಳೂರು ವಾಣಿಜ್ಯ ತೆರಿಗೆ ಅಧಿಕಾರಿ ಅಹ್ಮದ್ ಮುಖ್ಯ ಅತಿಥಿಯಾಗಿದ್ದರು.
ಸಂದರ್ಶಕ ಸಮಿತಿ ಸದಸ್ಯರಾದ ಮಂಗಳೂರು ಎಸ್‌ಡಿಆರ್‌ಎಫ್ ಪೊಲೀಸ್ ಉಪ ನಿರೀಕ್ಷಕ ಮುಶಾಹಿದ್ ಅಹ್ಮದ್ ಮತ್ತು ವಾರ್ತಾಭಾರತಿಯ ಜನರಲ್ ಮ್ಯಾನೇಜರ್ ಬಿ.ಎಂ.ರುಮಾನ್ ಅಹ್ಮದ್ , ಮೀಫ್ ಉಪಾಧ್ಯಕ್ಷ ಪರ್ವೆಝ್ ಅಲಿ, ಕನ್ವಿನರ್ ಮುಹಮ್ಮದ್ ಫಾರೂಕ್ , ಯುಪಿಎಸ್‌ಸಿ ಕೋಚ್ ಮುಹಮ್ಮದ್ ಶಿಯಾಬುದ್ದೀನ್ ಉಪಸ್ಥಿತರಿದ್ದರು.
ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀಫ್ ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ಸ್ವಾಗತಿಸಿದರು. ಕೋಶಾಧಿಕಾರಿ ನಿಸ್ಸಾರ್ ಫಕೀರ್ ಅಹ್ಮದ್ ವಂದಿಸಿದರು. ಶಿಕ್ಷಕಿ ನಿತಾಶಾ ಮತ್ತು ಮೀಫ್ ಕಾರ್ಯದರ್ಶಿ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ನಡೆದ ‘ಮೀಫ್ -ಸಿವಿಲ್ ಕ್ವೆಸ್ಟ್ 1.0’ ಕಾರ್ಯಕ್ರಮವನ್ನು ಮಂಗಳೂರು ಪೊಲೀಸ್ ಉಪಾಯುಕ್ತ ಮಿಥುನ್ ಎಚ್.ಎನ್. ಉದ್ಘಾಟಿಸಿದರು.
ಈ ಸಂದರ್ಭದಲ್ಲಿ 38 ಶಿಕ್ಷಣ ಸಂಸ್ಥೆಗಳ ಪ್ರೌಢ ಶಾಲೆಯ 124 ಮತ್ತು ಪದವಿ ಪೂರ್ವ ಕಾಲೇಜಿನ 30 ವಿದ್ಯಾರ್ಥಿಗಳು ಸೇರಿದಂತೆ 154 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಭಾಷಣ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದ 15 ಹಾಗೂ ಪಿಯುಸಿ 5 ವಿದ್ಯಾರ್ಥಿಗಳು ಸೇರಿದಂತೆ 20 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮವಾಗಿ ಪ್ರೌಢಶಾಲಾ ವಿಭಾಗದ 5 ಮತ್ತು ಪಿಯಸಿ 3 ಮಂದಿ ವಿದ್ಯಾರ್ಥಿಗಳು ಸಂದರ್ಶನಕ್ಕೆ ಆಯ್ಕೆ ಯಾಗಿದ್ದರು. ಇದರಲ್ಲಿ ಪ್ರೌಢಶಾಲಾ ವಿಭಾಗದಲ್ಲಿ 3 ಮತ್ತು ಪಿಯುಸಿ ವಿಭಾಗದ 2 ಮಂದಿ ಪ್ರಶಸ್ತಿಗೆ ಆಯ್ಕೆಯಾದರು. ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಕನ್ವೀನರ್‌ಗಳಾದ ಆದಿಲ್ ಸೂಫಿ ಸ್ವಾಗತಿಸಿ ಮತ್ತು ಅಝೀಝ್ ಅಂಬರ್‌ವ್ಯಾಲಿ ವಂದಿಸಿದರು.
ಸಂದರ್ಶಕ ಸಮಿತಿಯು ಯುಪಿಎಸ್‌ಸಿ ಸ್ಪರ್ಧಾ ಆಕಾಂಕ್ಷಿಗಳ ಸಂದರ್ಶನ ನಡೆಸಿತು. ಮೀಫ್ ಕಾರ್ಯದರ್ಶಿ ಅನ್ವರ್ ಹುಸೈನ್ ವಂದಿಸಿದರು.







